ADVERTISEMENT

ಸ್ವಾವಲಂಬಿ ಉದ್ಯಮಿಗಳ ಪ್ರೋತ್ಸಾಹಿಸಿ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 15:54 IST
Last Updated 20 ಮೇ 2022, 15:54 IST
ಕೋಲಾರದಲ್ಲಿ ಶುಕ್ರವಾರ ಆರಂಭವಾದ ಶ್ರೀಧನ್ಯಾ ಆಹಾರ ಉತ್ಪನ್ನಗಳ ಮಳಿಗೆಯ ಹೊರ ನೋಟ
ಕೋಲಾರದಲ್ಲಿ ಶುಕ್ರವಾರ ಆರಂಭವಾದ ಶ್ರೀಧನ್ಯಾ ಆಹಾರ ಉತ್ಪನ್ನಗಳ ಮಳಿಗೆಯ ಹೊರ ನೋಟ   

ಕೋಲಾರ: ‘ಮಹಿಳೆಯರು ಮತ್ತು ಯುವಕ ಯುವತಿಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಅವಕಾಶ ಕಲ್ಪಿಸುತ್ತಿರುವ `ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ' ಟ್ರಸ್ಟ್‌ನ ಧ್ಯೇಯ ಶ್ಲಾಘನೀಯ. ಟ್ರಸ್ಟ್‌ಗೆ ಬ್ಯಾಂಕ್ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ರೈತರು ಹಾಗೂ ಸ್ವಯಂ ಉದ್ಯೋಗಸ್ಥ ಯುವಕ, ಯುವತಿಯರು ತಯಾರಿಸುವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ನಗರದ ಖಾದ್ರಿಪುರ ಮುಖ್ಯರಸ್ತೆಯಲ್ಲಿ ಆರಂಭಿಸಿರುವ ಶ್ರೀಧನ್ಯಾ ಆಹಾರ ಉತ್ಪನ್ನಗಳ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವ ಯುವಕ ಯುವತಿಯರು, ಮಹಿಳೆಯರಿಗೆ ಇದು ಆಶಾಕಿರಣವಾಗಿದೆ. ಇವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ. ಜನರು ಸ್ವದೇಶಿ ಕಲ್ಪನೆಯೊಂದಿಗೆ ಶ್ರೀಧನ್ಯಾ ಮಳಿಗೆಯಲ್ಲೇ ಅಗತ್ಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು’ ಎಂದು ಕೋರಿದರು.

ADVERTISEMENT

‘ನವೋದ್ಯಮಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದೆ ಬಂದರೆ ಬ್ಯಾಂಕ್ ಎಲ್ಲಾ ನೆರವು ಒದಗಿಸಲು ಸಿದ್ಧವಿದೆ `ಮನೆಗೊಬ್ಬ ಉದ್ಯಮಿ ಊರಿಗೊಂದು ಉದ್ಯಮ' ಪರಿಕಲ್ಪನೆಯನ್ನು ಹೊಂದಿರುವ `ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ' ಟ್ರಸ್ಟ್‌ನ ಧ್ಯೇಯವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ಮಾರುಕಟ್ಟೆ ಸಮಸ್ಯೆ: ‘ಯಾವುದೇ ಉದ್ಯಮ ಸ್ಥಾಪಿಸಲು ಮಾರುಕಟ್ಟೆ ಸಮಸ್ಯೆ ಸಹಜ. ಇದನ್ನು ಅರಿತು ಮಾರುಕಟ್ಟೆ ಒದಗಿಸಲು ಈ ಟ್ರಸ್ಟ್ ಮುಂದೆ ಬಂದಿದೆ. ಉದ್ಯಮಿಗಳಿಗೆ ಸ್ಫೂರ್ತಿ ತುಂಬಿ ಸಮಾಜದಲ್ಲಿನ ಆರ್ಥಿಕ ಅಸಮಾನತೆ, ನಿರುದ್ಯೋಗ ಹೋಗಲಾಡಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದು, ಇದನ್ನು ಬೆಳೆಸೋಣ ಮತ್ತು ಉಳಿಸೋಣ’ ಎಂದರು.

‘ಸಮುದಾಯಕ್ಕೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ಉದ್ಯಮವನ್ನು ರೈತೋದ್ಯಮ, ಮಹಿಳೋದ್ಯಮ, ನವ ಯುವ ಉದ್ಯಮಿಗಳ ಸೃಷ್ಟಿ ಎಂದು 3 ಭಾಗಗಳಾಗಿ ವಿಂಗಡಿಸಿ ಟ್ರಸ್ಟ್ ಕೆಲಸ ಮಾಡುತ್ತಿದೆ’ ಎಂದು ವಿವರಿಸಿದರು.

‘ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಶ್ರೀಧನ್ಯ ಮಳಿಗೆ ಮೂಲಕ ಮಾರುಕಟ್ಟೆ ಒದಗಿಸಿ ಪ್ರೋತ್ಸಾಹಿಸುವ ಸದುದ್ದೇಶಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಜನರು ಹೆಚ್ಚಿನ ರೀತಿಯಲ್ಲಿ ಅಗತ್ಯ ವಸ್ತುಗಳನ್ನು ಇಲ್ಲಿಯೇ ಖರೀದಿಸುವ ಮೂಲಕ ಸ್ವದೇಶಿ ಉದ್ಯಮ ಪ್ರೋತ್ಸಾಹಿಸಿ, ಹೊಸ ಉದ್ಯಮ ಮತ್ತು ಉದ್ಯಮಿಗಳ ಸೃಷ್ಟಿಗೆ ಕಾರಣರಾಗಬೇಕು’ ಎಂದು ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ ಟ್ರಸ್ಟ್ ಕಾರ್ಯದರ್ಶಿ ಮನೋಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.