ADVERTISEMENT

ಶ್ರೀನಿವಾಸಪುರ | ಅರಣ್ಯ ಭೂಮಿ ಒತ್ತುವರಿ: 500 ಎಕರೆ ತೆರವು

ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:26 IST
Last Updated 17 ಅಕ್ಟೋಬರ್ 2025, 7:26 IST
ಶ್ರೀನಿವಾಸಪುರ ತಾಲ್ಲೂಕಿನ ಕೊಟ್ಲವಾರಿಪಲ್ಲಿ ಅರಣ್ಯ ಪ್ರದೇಶದಲ್ಲಿ ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು
ಶ್ರೀನಿವಾಸಪುರ ತಾಲ್ಲೂಕಿನ ಕೊಟ್ಲವಾರಿಪಲ್ಲಿ ಅರಣ್ಯ ಪ್ರದೇಶದಲ್ಲಿ ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು    

ಶ್ರೀನಿವಾಸಪುರ: ತಾಲ್ಲೂಕಿನ ಕೊಟ್ಲವಾರಿಪಲ್ಲಿ ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಸರ್ವೆ ಸಂಖ್ಯೆ 20 ರಲ್ಲಿ ಸುಮಾರು 540 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿ ಆಗಿದ್ದು, ಡಿಸಿಎಫ್‌ ಸರೀನಾ ಸಿಕ್ಕಲಿಗಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

20 ಜೆಸಿಬಿ, ಎರಡು ಮೀಸಲು ಪೊಲೀಸ್ ವಾಹನಗಳೊಂದಿಗೆ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೆ ಸುಮಾರು 200 ಎಕರೆ ತೆರವುಗೊಳಿಸಲಾಗಿದೆ. ಇನ್ನೂ ಎರಡು ದಿನ ಕಾರ್ಯಾಚರಣೆ ಮುಂದುವರಿಯಲಿದೆ.

ADVERTISEMENT

ಮಾವಿನ ಮರಗಳು, ತೋಟದ ಬೆಳೆಗಳಾದ ಟೊಮೆಟೊ, ಹೂವಿನ ಗಿಡಗಳು, ಇತರೆ ಬೆಳೆಗಳನ್ನ ಹಾಕಿದ್ದರು. ಅವುಗಳನ್ನು, ಕೊಳವೆಬಾವಿಯನ್ನ ಜಿಸಿಬಿ ಮೂಲಕ ನಾಶಪಡಿಸಲಾಗಿದೆ. ಒತ್ತುವರಿ ಜಾಗವನ್ನ ತೆರವುಗೊಳಿಸಿದ ಜಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪುನಃ ಗಿಡ ನೆಡುತ್ತಿದ್ದಾರೆ.

ರೈತರನ್ನು ಒತ್ತುವರಿ ಸ್ಥಳಕ್ಕೆ ಬಿಡದೆ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವ 30 ರೈತರಿಗೆ ಈಗಾಗಲೇ 4 ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ್ದರೂ ಪುನಃ ಬೆಳೆ ಬೆಳೆಯುತ್ತಿರುವುದಕ್ಕೆ ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

‘ಕೆಲ ರೈತರಿಂದ ಪ್ರತಿರೋಧ ಎದುರಾಯಿತು. ಅರಣ್ಯ ಜಾಗ ಇದಾಗಿದ್ದು ಈ ಹಿಂದೆಯೇ ನೋಟಿಸ್‌ ನೀಡಿದ್ದರೂ ಮತ್ತೆ ಬೆಳೆ ಬೆಳೆದಿದ್ದಾರೆ. ಟೊಮೆಟೊ ಕಟಾವಿಗೆ ಅವಕಾಶ ಕೂಡ ನೀಡಿದ್ದೇವೆ’ ಎಂದು ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ತಿಳಿಸಿದರು.

ಎಸಿಎಫ್ ಕೆ.ಮಹೇಶ್, ಆರ್‌ಎಫ್‌ಒ ರವಿಕೀರ್ತಿ, ಪೊಲೀಸ್‌ ಇನ್‌ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್‌ಸ್ಪೆಕ್ಟರ್‌ ರಾಮು, ಜಯರಾಮ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕೋಲಾರ ಜಿಲ್ಲೆಯಲ್ಲಿ 8 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ಒತ್ತುವರಿ ಆಗಿದೆ. ಹಿಂದಿನ ಡಿಸಿಎಫ್‌ ಏಡುಕೊಂಡಲು 2500 ಎಕರೆ ಬಿಡಿಸಿದ್ದರು. ನಾನು ಬಂದ ಮೇಲೆ 700 ಎಕರೆ ತೆರವಾಗಿದೆ
ಸರೀನಾ ಸಿಕ್ಕಲಿಗಾರ್‌ ಡಿಸಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.