ಬಂಗಾರಪೇಟೆ: ಪ್ರತಿಯೊಂದು ಗ್ರಾಮಕ್ಕೂ ಸ್ಮಶಾನಗಳು ಅಗತ್ಯವಿದ್ದರೂ, ಸ್ಮಶಾನಗಳಲ್ಲಿ ಮೂಲಸೌಲಭ್ಯಗಳಿಲ್ಲದೆ ಸ್ಥಳೀಯರು ಪರದಾಡುವಂತಾಗುತ್ತಿದೆ.
ಜಮೀನು ಇದ್ದವರು ಶವ ಸಂಸ್ಕಾರವನ್ನು ತಮ್ಮ ಜಮೀನಿನಲ್ಲಿ ಮಾಡಿದರೆ, ಜಮೀನು ಇಲ್ಲದವರು ಸ್ಮಶಾನವನ್ನೇ ಆಶ್ರಯಿಸಬೇಕಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಬಲಾಢ್ಯರು, ಪ್ರಭಾವಿಗಳು ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಸ್ಮಶಾನಕ್ಕೆ ಸೂಕ್ತ ರಸ್ತೆ, ನೀರಿನ ವ್ಯವಸ್ಥೆ, ಕಾಂಪೌಡ್, ಸ್ವಚ್ಛತೆ ಇಲ್ಲದೆ ಸಾರ್ವಜನಿಕರಿಗೆ ತಲೆನೋವಾಗಿದೆ.
ಹಾಗಾಗಿ ಕಂದಾಯ ಇಲಾಖೆಯವರು ಸ್ಮಶಾನವನ್ನು ಸರ್ವೆ ಮಾಡಿಸಿ ಒತ್ತುವರಿದಾರರಿಂದ ತೆರವುಗೂಳಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಬೇಕು. ಜತೆಗೆ ಶವ ಸಂಸ್ಕಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನೂ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಸ್ಮಶಾನವೇ ಇಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜತೆಗೆ ಕೆಲವು ಗ್ರಾಮಗಳಿಗೆ ಶಾಸಕರು ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿಸಿದ್ದರೂ ಅಧಿಕಾರಿಗಳು ಸರ್ವೆ ನಡೆಸಿ ಸ್ಮಶಾನ ಜಾಗವನ್ನು ಗುರುತಿಸಲು ಆಸಕ್ತಿ ವಹಿಸುತ್ತಿಲ್ಲ ಎಂಬುದು ಸ್ಥಳೀಯರ ಬೇಸರವಾಗಿದೆ.
ಈಗಾಗಲೇ ಕೆಲವು ಗ್ರಾಮಗಳ ಸ್ಮಶಾನಗಳನ್ನು ಸರ್ವೆ ಮಾಡಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಉಳಿದ ಗ್ರಾಮಗಳ ಸ್ಮಶಾನ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ರಶ್ಮಿ , ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.