ADVERTISEMENT

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ; ನಂಜಾವಧೂತ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 4:02 IST
Last Updated 19 ಫೆಬ್ರುವರಿ 2021, 4:02 IST
ಮಾಲೂರು ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತನಾಡಿದರು
ಮಾಲೂರು ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತನಾಡಿದರು   

ಮಾಲೂರು: ಯುವಕರಲ್ಲಿ ಸಂಸ್ಕೃತಿ, ಸಂಸ್ಕಾರ ಮೂಡಬೇಕು. ಅಂತಹ ಕೆಲಸಗಳು ಸಮಾಜದಲ್ಲಿ ನಡೆದಾಗ ಮಾತ್ರ ಸಮಾಜದ ಸುಧಾರಣೆಯಾಗುತ್ತದೆ ಎಂದು ಪಟ್ಟನಾಯಕನಹಳ್ಳಿಯ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣ ಹೊರವಲಯದಲ್ಲಿ ಗುರುವಾರ ನೂತನವಾಗಿ ನಿರ್ಮಾಣ ಗೊಂಡಿರುವ ಪಿಆರ್‌ಎ ಪ್ಯಾಲೇಸ್ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನ ಮನಸ್ಸು ಚಂಚಲವಾದುದು. ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ಜ್ಞಾನ ವೃದ್ಧಿಕೊಳ್ಳಬೇಕು. ಮಾನವ ಜನ್ಮ ಪಾಪ, ಪುಣ್ಯಗಳ ಸಮ್ಮಿಶ್ರಣ. ಈ ಜನ್ಮವನ್ನು ಕೇವಲ ಭೋಗದ ಸುಖಕ್ಕಾಗಿ ಹಾಳು ಮಾಡಿಕೊಳ್ಳಬಾರದು. ಸದ್ಗುಣಗಳಿಂದ ಮುಕ್ತಿ ಪಡೆಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಮೀಸಲಾತಿ ಹೆಚ್ಚಿಸಿ: ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಬಹುಸಂಖ್ಯಾತರಾದ ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇಕಡ 17ಕ್ಕೆ ಹೆಚ್ಚಿಸಬೇಕು. ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ₹ 500 ಕೋಟಿ ಅನುದಾನ ಮೀಸಲಿಡಲಾಗಿದೆ. ಹಾಗೆಯೇ, ಒಕ್ಕಲಿಗರನಿಗಮಕ್ಕೂ ₹ 1 ಸಾವಿರ ಕೋಟಿ ಅನುದಾನ ಮೀಸಲಿಡಬೇಕು. ಸಮುದಾಯವನ್ನು ಕೇಂದ್ರದಲ್ಲಿ ಒಬಿಸಿ ಮೀಸಲಾತಿಗೆ ಶಿಫಾರಸು ಮಾಡಿರುವುದು ಹರ್ಷದಾಯಕ ಎಂದು ತಿಳಿಸಿದರು.

ಒಕ್ಕಲಿಗ ಸಮುದಾಯದ 115 ಉಪ ಜಾತಿಗಳನ್ನೂ ಒಬಿಸಿ ಪಟ್ಟಿಗೆ ಸೇರಿಸುವ ಮೂಲಕ ಈ ಸಮಾಜಕ್ಕೂ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಶಾಸಕ ಕೆ.ವೈ. ನಂಜೇಗೌಡ, ಪುರಸಭೆ ಅಧ್ಯಕ್ಷ ಮುರಳೀಧರ್, ಜಿ.ಪಂ ಮಾಜಿ ಸದಸ್ಯ ಜಿ.ಇ. ರಾಮೇಗೌಡ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಡಾ.ಬಿ.ಎನ್. ಜಗದೀಶ್ ಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಕೆ. ದಿನೇಶ್ ಗೌಡ, ಕಲ್ಯಾಣ ಮಂಟಪದ ಮಾಲೀಕ ರಾಮೇಗೌಡ, ಮುಖಂಡರಾದ ಕೋಡಳ್ಳಿ ಸೋಣ್ಣಪ್ಪ, ರಾಘವೇಂದ್ರ
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.