ADVERTISEMENT

ಸಹಕಾರ ರಂಗದಲ್ಲಿ ಜನರಿಕ್ ಮಳಿಗೆ ಸ್ಥಾಪನೆ: ಶಾಸಕ ರಮೇಶ್‌ಕುಮಾರ್‌ ಕಿಡಿ

ರೋಗಿಗಳ ಮೇಲೆ ಫಾರ್ಮಸಿ ಮಾಫಿಯಾ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 15:33 IST
Last Updated 17 ಮಾರ್ಚ್ 2021, 15:33 IST
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿದರು.   

ಕೋಲಾರ: ‘ಬಂಡವಾಳಶಾಹಿ ಫಾರ್ಮಸಿ ಮಾಫಿಯಾ ಬಡ ರೋಗಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಯಲು ಸಹಕಾರ ರಂಗದಿಂದ ಜನರಿಕ್ ಔಷಧ ಮಳಿಗೆ ತೆರೆಯಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಕಿವಿಮಾತು ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಜನೌಷಧ ಕೇಂದ್ರ ಸ್ಥಾಪನೆ, ಎನ್‌ಪಿಎ, ಸಾಲ ವಸೂಲಾತಿ ಕುರಿತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಅನಂತಕುಮಾರ್‌ ಕೇಂದ್ರ ಸಚಿವರಾಗಿದ್ದಾಗ ರಾಜ್ಯದಲ್ಲಿ 300 ಜನರಿಕ್ ಮಳಿಗೆ ಸ್ಥಾಪಿಸಲು ಸಹಿ ಹಾಕಿದೆ. ಆದರೆ, ಪ್ರಬಲವಾಗಿರುವ ಔಷಧ ಮಳಿಗೆಗಳ ಮಾಲೀಕರು ಇದು ಕಾರ್ಯಗತವಾಗದಂತೆ ಮಾಡಿಬಿಟ್ಟರು. ಇದರ ವಿರುದ್ಧ ದೆಹಲಿಯ ಭಾರತೀಯ ಮೆಡಿಕಲ್ ಸೈನ್ಸ್ ಸಂಸ್ಥೆಗೆ ಹೋಗಿ ಫಾರ್ಮಸಿ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಬಡ ರೋಗಿಗಳ ರಕ್ಷಣೆಗಾಗಿ ಆರಂಭಿಸುತ್ತಿರುವ ಜನರಿಕ್ ಔಷಧ ಮಳಿಗೆಗಳ ವಿರುದ್ಧ ಫಾರ್ಮಸಿ ಮಾಫಿಯಾ ಕೆಲಸ ಮಾಡುವ ಆತಂಕವಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಕ್ ಔಷಧ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳ ಜತೆ ಮಾತುಕತೆ ನಡೆಸಬೇಕು’ ಎಂದು ಹೇಳಿದರು.

ತಿಮ್ಮಪ್ಪನ ನಾಮ: ‘ಬ್ಯಾಂಕ್‌ಗಳಲ್ಲಿ ಬಡವರು ಸಾಲ ಪಡೆಯಲು ಆಸ್ತಿ ಅಡಮಾನ ಇಡಬೇಕು. ಆದರೆ, ಶ್ರೀಮಂತರು ಯಾವುದೇ ಅಡಮಾನ ಇಡಬೇಕಿಲ್ಲ. ₹ 100 ಕೋಟಿಗೂ ಹೆಚ್ಚು ಸಾಲ ಪಡೆಯಲು ಯಾವುದೇ ಆಸ್ತಿ ಅಡಮಾನ ಬೇಕಿಲ್ಲ. ಕೊನೆಗೆ ಅವರಿಂದ ದೊರೆಯುವುದು ತಿರುಪತಿ ತಿಮ್ಮಪ್ಪನ ಮೂರು ನಾಮ’ ಎಂದು ವ್ಯಂಗ್ಯವಾಡಿದರು.

‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿ ಕ್ರಾಂತಿ ಮಾಡಿದ್ದೇವೆ. ಬ್ಯಾಂಕ್‌ ಮತ್ತು ಸೊಸೈಟಿಗಳನ್ನು ಯಾರಿಗೂ ಬರೆದುಕೊಟ್ಟಿಲ್ಲ. ಮುಖಂಡರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯ ಇದ್ದರೆ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಬಡ ಹೆಣ್ಣು ಮಕ್ಕಳು, ರೈತರ ತಲೆ ಮೇಲೆ ಕಲ್ಲು ಹಾಕಬಾರದು’ ಎಂದು ಗುಡುಗಿದರು.

‘ಚುನಾವಣೆ ಮೂಲಕ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸದಸ್ಯತ್ವ ಕೊಡದೆ ಇರಬೇಡಿ. ಪ್ರತಿ ಹಳ್ಳಿಯ, ಪ್ರತಿ ಕುಟುಂಬದವರು ಸಹಕಾರ ರಂಗದ ಸದಸ್ಯತ್ವ ಪಡೆಯಬೇಕು. ಇದರಿಂದ ಸಹಕಾರಿ ವ್ಯವಸ್ಥೆಯ ಪ್ರಾಮುಖ್ಯತೆ ಅರಿವಾಗುತ್ತದೆ’ ಎಂದು ಸಲಹೆ ನೀಡಿದರು.

ಲೆಕ್ಕಕ್ಕಿಲ್ಲ: ‘ದೆಹಲಿ ಗಡಿಯಲ್ಲಿ ರೈತರು ನಿರಂತರ ಚಳವಳಿ ನಡೆಸುತ್ತಿದ್ದು, 200 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಮಾತೆ ಮೇಲೆ ಪ್ರೀತಿ ಹೆಚ್ಚಾದಾಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ. ರಸಗೊಬ್ಬರ, ಕೃಷಿ ಸಾಮಗ್ರಿ ಬೆಲೆ ಏರಿಕೆಯಾಗಿದೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಿದೆ. ಬಡವರು, ರೈತರು ಸಾಯುತ್ತಿದ್ದರೂ ಸರ್ಕಾರದವರಿಗೆ ಲೆಕ್ಕಕ್ಕಿಲ್ಲವಾಗಿದೆ’ ಎಂದು ಟೀಕಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ರಾಜೇಂದ್ರಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.