ADVERTISEMENT

ಕೆಜಿಎಫ್‌ನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ: ಜಿಲ್ಲಾಧಿಕಾರಿ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 8:58 IST
Last Updated 2 ಜನವರಿ 2020, 8:58 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಕೆಜಿಎಫ್‌ನಲ್ಲಿ 4 ಸಾವಿರ ಎಕರೆ ಖಾಲಿ ಜಾಗವಿದ್ದು, ಅಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಇಲ್ಲಿ ಬುಧವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕಲಬುರ್ಗಿಯಲ್ಲಿರುವ ಸೋಲಾರ್ ಪ್ಯಾನಲ್ ತಯಾರಿಕೆ ಕೈಗಾರಿಕೆಗಳು ಬಂದರು ಅಪೇಕ್ಷಿಸಿವೆ. ಕೆಜಿಎಫ್‌ಗೆ ಚೆನ್ನೈನ ಬಂದರು ಸಮೀಪದಲ್ಲಿರುವುದರಿಂದ ಕೈಗಾರಿಕೆಗಳು ಇಲ್ಲಿಗೆ ಬರಲು ಆಸಕ್ತಿ ತೋರಿವೆ’ ಎಂದು ಹೇಳಿದರು.

‘ಕೋಲಾರ ಭಾಗದಲ್ಲಿ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ ನಿರ್ಮಾಣವಾಗುತ್ತಿರುವುದರಿಂದ ಕಂಪನಿಗಳಿಗೆ ಅನುಕೂಲವಾಗುತ್ತದೆ. ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಸುಮಾರು 300 ಎಕರೆ ವಿಸ್ತರಣೆಗೆ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಂದಾಗಿದೆ. ಕೈಗಾರಿಕೆಗಳು ವಿಸ್ತರಣೆಗಾಗಿ ಮತ್ತಷ್ಟು ಜಮೀನು ಕೇಳುತ್ತಿವೆ’ ಎಂದು ವಿವರಿಸಿದರು.

ADVERTISEMENT

‘ವೇಮಗಲ್‌ನಲ್ಲಿ ಜಿಎಸ್‌ಕೆ ಕಂಪನಿಯು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ. ‘ವಿಸ್ಟ್ರಾನ್ ಕಂಪನಿಯ 25 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಿದ್ದು, ಈ ವರ್ಷದಲ್ಲಿ 12 ಸಾವಿರ ನೇಮಕಾತಿ ನಡೆಸಲು ಉದ್ದೇಶಿಸಿದೆ. ಕೌಶಲ ತರಬೇತಿ ನೀಡುವ ಮೂಲಕ ಸ್ಥಳೀಯರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕದ ಅವಶ್ಯಕತೆಯಿದ್ದು, ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ) ಮೂಲಕ ಸ್ಥಾಪನೆ ಪ್ರಯತ್ನ ನಡೆದಿದೆ’ ಎಂದು ಮಾಹಿತಿ ನೀಡಿದರು.

ಅನುದಾನ ಬಳಸಿ: ‘ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಫೆ.15ರೊಳಗೆ ಬಳಕೆ ಮಾಡಬೇಕು, ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋದರೆ ಅಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸುತ್ತೇವೆ. ಅನುದಾನ ವಾಪಸ್‌ ಹೋದರೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಅರ್ಥ. ಇದನ್ನು ಕರ್ತವ್ಯ ಲೋಪವೆಂದು ಪರಿಗಣಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಅಧಿಕಾರಿಗಳು ತಂತ್ರಜ್ಞಾನಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸಿದರೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ನಾಲ್ಕನೇ ತ್ರೈಮಾಸಿಕವಾದ್ದರಿಂದ ಫೆ.೧೫ರೊಳಗೆ ಎಲ್ಲಾ ಯೋಜನೆ ಅನುದಾನ ಬಳಕೆ ಮಾಡಬೇಕು. ಬಜೆಟ್‌ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಗೆ ಸಂಪನ್ಮೂಲ ಕ್ರೂಢೀಕರಣ ಹಾಗೂ ಇತರ ಕೆಲಸದ ಒತ್ತಡ ಇರುತ್ತದೆ. ಹೆಚ್ಚುವರಿ ಹಣವಿದ್ದರೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು. ಸಾರ್ವಜನಿಕರ ಕೆಲಸಕ್ಕೆ ಉಪಯೋಗಿಸಿ’ ಎಂದು ಸಲಹೆ ನೀಡಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆಯ 124 ಕೆರೆಗಳು ತುಂಬಲಿವೆ. 2ನೇ ಹಂತದಲ್ಲಿ 243 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಎಲ್ಲಾ ಕೆರೆಗಳಿಗೆ ನೀರು ತುಂಬಿದ ಮೇಲೆ ಕೃಷಿ, ತೋಟಗಾರಿಕೆ ಚಟುವಟಿಕೆ ಚುರುಕುಗೊಳ್ಳುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಯಿಲ್ಲ: ‘ಕೆ.ಸಿ ವ್ಯಾಲಿ ನೀರು ಹರಿದಿರುವ ಕೆರೆಗಳ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಸುಧಾರಣೆಯಾಗಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಮರುಪೂರಣಗೊಂಡಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ’ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಎಂಜಿನಿಯರ್ ವೆಂಕಟಾಚಲಯ್ಯ ವಿವರಿಸಿದರು.

‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಜತೆಗೆ ಖುದ್ದು ಗ್ರಾಮಗಳಿಗೆ ತೆರಳಿ ನೀರಿನ ಸಮಸ್ಯೆ ಪರಿಶೀಲಿಸುತ್ತೇವೆ. ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ನೀರಿನ ಸೌಕರ್ಯ ಕಲ್ಪಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಅತ್ಯುತ್ತಮ ಪ್ರಗತಿ: ‘ರಾಜ್ಯದಲ್ಲಿ ಕೃಷಿ ಇಲಾಖೆ ಈ ವರ್ಷ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನಲ್ಲಿ ಗುರುವಾರ (ನ.2) ಕೃಷಿ ಕರ್ಮಣ್ಯ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಎಲ್ಲಾ ರಾಜ್ಯಗಳ ಕೃಷಿ ಸಚಿವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶ್ರೀಶೈಲಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕ (ಡಿಡಿಎಲ್‌ಆರ್‌) ಗೋಪಾಲಯ್ಯ, ಹಿರಿಯ ಭೂವಿಜ್ಞಾನಿ ತಿಪ್ಪೇಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.