ADVERTISEMENT

ಜಿಲ್ಲೆಯಲ್ಲಿ ಮದ್ಯ ಮಾರಾಟ ಕುಸಿತ, ಸಭೆ

ಗುರಿ ಸಾಧಿಸಲು ಕ್ರಮವಹಿಸಲಾಗುವುದು: ಅಬಕಾರಿ ಇಲಾಖೆ ಆಯುಕ್ತ ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 2:30 IST
Last Updated 11 ಜುಲೈ 2025, 2:30 IST
ವೆಂಕಟೇಶ್‌
ವೆಂಕಟೇಶ್‌   

ಕೋಲಾರ: ಜಿಲ್ಲೆಯಲ್ಲಿ ಮದ್ಯ ಮಾರಾಟ ಕುಸಿದಿರುವ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಲು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಗುರಿ ಸಾಧಿಸಲು ಕ್ರಮ ವಹಿಸಲಾಗುವುದು ಎಂದು ಅಬಕಾರಿ ಇಲಾಖೆ ಆಯುಕ್ತ ವೆಂಕಟೇಶ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ಮದ್ಯ ಮಾರಾಟ ಕುಸಿಯಲು ಆಂಧ್ರ ಪ್ರದೇಶದಲ್ಲಿರುವ ಮದ್ಯ ನೀತಿಯೂ ಒಂದು ಕಾರಣ. ಆಂಧ್ರ ರಾಜ್ಯದ ಮದ್ಯ ದರಕ್ಕೂ, ಕರ್ನಾಟಕ ಮದ್ಯ ದರಕ್ಕೂ ವ್ಯತ್ಯಾಸಗಳು ಇವೆ. ಆಂಧ್ರದಲ್ಲಿ ಓಸಿ ₹120ಕ್ಕೆ ಮಾರಾಟವಾಗುತ್ತಿದ್ದರೆ, ನಮ್ಮಲ್ಲಿ ₹95ಕ್ಕೆ ಮಾರಾಟವಾಗುತ್ತಿದೆ’ ಎಂದು ಉದಾಹರಿಸಿದರು.

‘ಸರ್ಕಾರಕ್ಕೆ ಅಬಕಾರಿ ಇಲಾಖೆಯು ಆದಾಯ ಮೂಲವಾಗಿದ್ದು, ಈ ಬಗ್ಗೆ ಬಜೆಟ್‌ನಲ್ಲೇ ನಿಗದಿ ಮಾಡಲಾಗಿದೆ. ಈಚೆಗೆ ಕೋಲಾರ ಜಿಲ್ಲೆಯಲ್ಲಿ ಮದ್ಯ ಮಾರಾಟ ಕಡಿಮೆಯಾಗಿದ್ದು, ಸುಧಾರಣೆ ಮಾಡಿಕೊಳ್ಳಬೇಕು. ಈ ಸಂಬಂಧ ಮಾರಾಟಗಾರರ ಸಲಹೆಗಳಂತೆ ಕ್ರಮ ವಹಿಸಲಾಗುವುದು’ ಎಂದರು.

ADVERTISEMENT

‘ಹೊಸ ಪರವಾನಗಿ ನೀಡಬೇಕಾದರೆ ಇಲಾಖೆಯ ಕಾಯ್ದೆಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳಿಂದ ವಹಿವಾಟು ಪರವಾನಗಿ ಪಡೆದುಕೊಂಡಿದ್ದಾರೆಯೇ ಎಂಬುದು ಸೇರಿದಂತೆ ಇರುವ ನಿಯಮಗಳ ಪರಿಶೀಲನೆ ಆಗಬೇಕು. ಲೋಪಗಳು ಇದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು’ ಎಂದರು.

‘ರಾಜ್ಯದಲ್ಲಿ ಹೊಸದಾಗಿ ಅಬಕಾರಿ ಪರವಾನಗಿ ನೀಡಬೇಕಾದರೆ ನಿಯಮ ಪಾಲನೆ ಮಾಡಲಾಗುತ್ತಿದೆ. ಪರವಾನಗಿ ಪಡೆದುಕೊಳ್ಳುವ ಮುಂಚೆ ಮಳಿಗೆ ತೆರೆಯುವ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯಿಂದ ವಾಣಿಜ್ಯ ಟ್ರೇಡ್‌ ಲೈಸನ್ಸ್‌ ಪಡೆದುಕೊಳ್ಳಬೇಕು. ಆ ಸಂದರ್ಭದಲ್ಲಿ ಭೂ ಪರಿವರ್ತನೆ, ಕಟ್ಟಡ ನಿರ್ಮಾಣ, ಮೂಲ ಸೌಲಭ್ಯ ಹೀಗೆ ಪರಿಶೀಲನೆ ನೀಡುತ್ತಾರೆ. ಅಬಕಾರಿ ಇಲಾಖೆಯಿಂದ ದೇವಾಲಯ, ಶಾಲೆ, ಸರ್ಕಾರಿ ಕಚೇರಿ ಈವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಎನ್‌ಒಸಿ ಪಡೆದುಕೊಂಡರೆ ಲೈಸೆನ್ಸ್‌ ನೀಡಬೇಕಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಬೆಳ್ಳಂ ಬೆಳಿಗ್ಗೆ ಬಾರ್‌ಗಳನ್ನು ತೆರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಬಾರ್‌ಗಳನ್ನು ತೆಗೆಯಲು, ಮುಚ್ಚಲು ಸಮಯ ನಿಗದಿಪಡಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾವಹಿಸಲಾಗುತ್ತಿದೆ. ಪರಿಶೀಲನೆ ನಡೆಸಿ, ಸಮಯ ಮೀರಿ ಅಂಗಡಿ ತೆಗೆಯುವುದವರ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಅಬಕಾರಿ ಇಲಾಖೆ ಕೋಲಾರ ಉಪಆಯುಕ್ತರಾದ ಸೈದಾ ಅಜಮತ್‌ ಅಪ್ರೀನ್‌ ಹಾಗೂ ಜಯರಾಮ್‌ ಸೇರಿದಂತೆ ಅಬಕಾರಿ ನಿರೀಕ್ಷರು ಇದ್ದರು.

ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಪ್ರಸಕ್ತ ಸಾಲಿನಲ್ಲಿ ₹ 40 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ. ಗುರಿ ಸಾಧನೆಗೆ ಇರುವ ಅಡಚಣೆ ನಿವಾರಿಸಲು ಕ್ರಮ ವಹಿಸಲಾಗಿದೆ -ವೆಂಕಟೇಶ್‌ ಅಬಕಾರಿ ಇಲಾಖೆ ಆಯುಕ್ತ

ಅನಗತ್ಯ ಬಾರ್‌ ಬಂದ್‌; ಸರ್ಕಾರದ ಗಮನಕ್ಕೆ

‘144 ಸೆಕ್ಷನ್‌ ಜಾರಿ ಆದಾಗ ಬಾರ್‌ಗಳ ಬಾಗಿಲು ಬಂದ್‌ ಮಾಡಿಸುವುದು ಸಹಜ. ಸಂತೆ ಜಾತ್ರೆ ಜಯಂತಿ ಚುನಾವಣೆಗಳ ವೇಳೆ ಎದುರಾಗುವ ಸಮಸ್ಯೆ ಪರಿಣಾಮಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರವಿದ್ದು ಆದೇಶವನ್ನು ಪಾಲನೆ ಮಾಡಬೇಕು’ ಎಂದು ಅಬಕಾರಿ ಆಯುಕ್ತ ವೆಂಕಟೇಶ್‌ ಹೇಳಿದರು. ಜಾತ್ರೆ ಜಯಂತಿ ಚುನಾವಣೆ ಸಂದರ್ಭದಲ್ಲಿ ವಿನಾಕಾರಣ ಬಾರ್‌ಗಳನ್ನು ಬಂದ್‌ ಮಾಡಿಸುವುದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ‘ಆದರೆ ಕೆಲ ಸನ್ನಿವೇಶಗಳಲ್ಲಿ ಸಮಸ್ಯೆ ಇರುವುದಿಲ್ಲ. ಹೀಗಾಗಿ ಪರಿಸ್ಥಿತಿ ಗಮನಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಈ ಪದ್ಧತಿ ಕೆಲ ಜಿಲ್ಲೆಗಳಲ್ಲಿ ಇದೆ ಕೆಲ ಜಿಲ್ಲೆಗಳಲ್ಲಿ ಇಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು ಅವಶ್ಯಕತೆಗೆ ತಕ್ಕಂತೆ ನೀಡಲು ಮನವಿ ಮಾಡಲಾಗಿದೆ’ ಎಂದರು.

- ಸನ್ನದುದಾರರು ಅಧಿಕಾರಿಗಳ ಸಭೆ

ಅಬಕಾರಿ ಇಲಾಖೆ ಆಯುಕ್ತ ಗುರುವಾರ ಪ್ರವಾಸಿ ಮಂದಿರದಲ್ಲಿ ಮದ್ಯ ಸನ್ನದುದಾರರು ಹಾಗೂ ಇಲಾಖಾಧಿಕಾರಿಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ ಮಾರಾಟ ಕುಸಿಯಲು ಕಾರಣಗಳು ಏನು ಎಂಬುದರ ಬಗ್ಗೆ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.