ADVERTISEMENT

ಈ ಬಾರಿ ಗಣಪನಿಗೆ ‘ಅಪ್ಪು’ ಸಾಥ್‌!

ಕಣ್ಮನ ಸೆಳೆಯುತ್ತಿರುವ ಗಣೇಶ–‍ಪುನೀತ್‌ ಮೂರ್ತಿ, ಹೆಚ್ಚಿದ ಬೇಡಿಕೆ

ಕೆ.ಓಂಕಾರ ಮೂರ್ತಿ
Published 25 ಆಗಸ್ಟ್ 2022, 2:44 IST
Last Updated 25 ಆಗಸ್ಟ್ 2022, 2:44 IST
ಗಣೇಶ–ಅಪ್ಪು ಮೂರ್ತಿಗಳ ಜೊತೆ ಕಲಾವಿದ ಮುತ್ತುರಾಜ್‌
ಗಣೇಶ–ಅಪ್ಪು ಮೂರ್ತಿಗಳ ಜೊತೆ ಕಲಾವಿದ ಮುತ್ತುರಾಜ್‌   

ಕೋಲಾರ: ಈ ಬಾರಿ ಗೌರಿ–ಗಣೇಶನ ಹಬ್ಬಕ್ಕೆ ಗಣಪನ ಮೂರ್ತಿ ಜೊತೆ ‘ನಗು ಮೊಗದ ರಾಜಕುಮಾರ’ ಅಪ್ಪು ಮನೆಗೆ ಬರುತ್ತಿದ್ದಾರೆ!

ನಗರದ ವಿವಿಧೆಡೆ ಪುನೀತ್‌ ರಾಜ್‌ಕುಮಾರ್‌ ಸಮೇತ ಗಣೇಶ ಮೂರ್ತಿ ತಯಾರಿಕೆ ಬಿರುಸಿನಿಂದ ನಡೆಯುತ್ತಿದ್ದು, ಬೇಡಿಕೆಯೂ ಹೆಚ್ಚಿದೆ. ಹೀಗಾಗಿ, ಈ ಸಲ ಗಜಮುಖನೊಂದಿಗೆ ಪುನೀತ್‌ ಮೂರ್ತಿಯನ್ನೂ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ.

ಹಲವು ತಿಂಗಳಿಂದ ಹಬ್ಬ, ಜಾತ್ರೆ, ಮೆರವಣಿಗೆ, ಕಾರ್ಯಕ್ರಮಗಳಲ್ಲಿ ಪುನೀತ್‌ ಪೋಸ್ಟರ್‌ಗಳು, ಭಾವಚಿತ್ರಗಳು, ಕಟೌಟ್‌ ರಾರಾಜಿಸುತ್ತಿದ್ದು, ಗಣೇಶ ಚತುರ್ಥಿ ಸಮೀಪಿಸುತ್ತಿರುವಂತೆ ಪುನೀತ್‌ ಮೂರ್ತಿಗಳ ಹವಾ ಶುರುವಾಗಿದೆ.

ADVERTISEMENT

ಅಪ್ಪುವಿನ ಹತ್ತಾರು ವಿಗ್ರಹಗಳ ತಯಾರಿಕೆ ನಡೆಯುತ್ತಿದೆ. ಅವರ ಆ ನಗು, ಹೇರ್‌ ಸ್ಟೈಲ್‌ ಮಣ್ಣಿನ ವಿಗ್ರಹಗಳಲ್ಲಿ ಒಡಮೂಡಿದೆ. ಆ ಮೂಲಕ ಕಲಾವಿದರು ಅಗಲಿದ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಈ ಮೂರ್ತಿಗಳನ್ನು ತಮ್ಮ ಮನೆ, ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲು ಈಗಿನಿಂದಲೇ ಯುವಕರು, ಹಿರಿಯರು ಬೇಡಿಕೆ ಇಡುತ್ತಿದ್ದಾರೆ. ವಿನಾಯಕ, ಮೂಷಿಕ ವಾಹನ, ಅಮ್ಮ ಗೌರಿ ಜೊತೆ ‘ಪವರ್‌ ಸ್ಟಾರ್‌’ ಅಪ್ಪು ಮೂರ್ತಿಯನ್ನೂ ಬರಮಾಡಿಕೊಳ್ಳುತ್ತಿದ್ದಾರೆ.

ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯಾಗಿರುವ ಇಲ್ಲಿನ ಗಾಂಧಿನಗರದ ಭೀಮರಾಜ್‌ ಕುಟುಂಬ ವೈವಿಧ್ಯಮಯವಾಗಿ ಅಪ್ಪು ಸಮೇತ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದೆ.

ಜೇಡಿ ಮಣ್ಣಿನಲ್ಲಿ ಎರಡೂವರೆ ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಿದ್ದು, ಪಾರಿವಾಳದ ಜೊತೆಗಿರುವ ಗಣೇಶ–ಅಪ್ಪು, ಗಣಪನ ಮಡಿಲಲ್ಲಿರುವ ಪುನೀತ್‌, ಅಪ್ಪುವನ್ನು ಮುದ್ದು ಮಾಡುತ್ತಿರುವ ಗಣೇಶ, ಪುನೀತ್‌ಗೆ ಮೋದಕ ತಿನ್ನಿಸುತ್ತಿರುವ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.

‘ಗಣೇಶಹಾಗೂ ಪಾರಿವಾಳ ಜೊತೆಗಿರುವ ಅಪ್ಪು ಮೂರ್ತಿಯನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕಳುಹಿಸಿಕೊಡಲಿದ್ದೇವೆ. ಮೂರ್ತಿ ತಯಾರಿಸುವ ಮೂಲಕ ಪವರ್‌ ಸ್ಟಾರ್‌ಗೆ ಗೌರವ, ಪ್ರೀತಿ ತೋರಿಸುತ್ತಿದ್ದೇವೆ’ ಎಂದು ಕಲಾವಿದ ಮುತ್ತುರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭೀಮರಾಜ್‌ 40 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಈಗ ಅವರ ಪತ್ನಿ ನಾಗರತ್ನಾ, ಪುತ್ರರಾದ ಗಣೇಶ್‌ ಪ್ರಸಾದ್‌, ಮುತ್ತುರಾಜ್‌, ಭಾನು ಕೈಜೋಡಿಸುತ್ತಿದ್ದಾರೆ. ಸದ್ಯ 30 ಗಣೇಶ–ಅಪ್ಪು ಮೂರ್ತಿ ಸಿದ್ಧವಾಗಿವೆ.

ಈ ಬಾರಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ಅನುಮತಿ ನೀಡಿರುವುದರಿಂದ ಜೀವಕಳೆ ಬಂದಿದೆ. ಗೌರಿ ಗಣೇಶ ಹಬ್ಬಕ್ಕೆ ಮಾರುಕಟ್ಟೆಗೆ ತರಹೇವಾರಿ ಗಣೇಶನ ಮೂರ್ತಿಗಳನ್ನು ಈಗಾಗಲೇ ತಂದು ಮಾರಾಟದಲ್ಲಿ ತೊಡಗಿದ್ದಾರೆ. ಕೆಲ ಕಲಾವಿದರು ಪುನೀತ್‌ ಹೆಸರಲ್ಲಿ ಬೇಡಿಕೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗಣೇಶನ ಜೊತೆ ಇರುವ ಅಪ್ಪು ಮೂರ್ತಿಗಳಿಗೆ ಗಾತ್ರಕ್ಕೆ ಅನುಗುಣವಾಗಿ ₹ 300ರಿಂದ ₹ 3 ಸಾವಿರದವರಿಗೆ ಹೇಳುತ್ತಿದ್ದಾರೆ. ಗಣೇಶ ಮೂರ್ತಿಯ ವ್ಯಾಪಾರ ವಹಿವಾಟು ನಿಧಾನವಾಗಿ ಕುದುರುತ್ತಿದೆ.

ಕೋವಿಡ್‌ ಕಾರಣ 2020ರಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಇರಲಿಲ್ಲ. 2021ರಲ್ಲಿ ನಿರ್ಬಂಧಗಳಡಿಯಲ್ಲಿ ಸರಳವಾಗಿ ಆಚರಿಸಲು ಅನುಮತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.