ADVERTISEMENT

ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ಸ್ಫೋಟದ ಎಚ್ಚರಿಕೆ,‌ ಸಾರಂಶದಲ್ಲಿ ನಕಲಿ ಪಾಸ್‌ಪೋರ್ಟ್‌ ದಂಧೆ ದೂರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 20:13 IST
Last Updated 30 ಡಿಸೆಂಬರ್ 2025, 20:13 IST
ಕೋಲಾರದ ಜಿಲ್ಲಾಡಳಿತ ಭವನಕ್ಕೆ ಮಂಗಳವಾರ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದರಿಂದ ಪೊಲೀಸರು ಶ್ವಾನದೊಂದಿಗೆ ಆವರಣ ತಪಾಸಣೆ ನಡೆಸಿದರು
ಕೋಲಾರದ ಜಿಲ್ಲಾಡಳಿತ ಭವನಕ್ಕೆ ಮಂಗಳವಾರ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದರಿಂದ ಪೊಲೀಸರು ಶ್ವಾನದೊಂದಿಗೆ ಆವರಣ ತಪಾಸಣೆ ನಡೆಸಿದರು   

ಕೋಲಾರ: ನಗರ ಹೊರವಲಯದಲ್ಲಿರುವ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಒಂದೇ ತಿಂಗಳಲ್ಲಿ ಎರಡನೇ ಬಾರಿ ಹುಸಿ ಬಾಂಬ್‌ ಬೆದರಿಕೆ ಬಂದಿದೆ.

ಕಳೆದ ಬಾರಿಯಂತೆಯೇ ಇ-ಮೇಲ್ ವಿಷಯ ಕಾಲಂನಲ್ಲಿ (ಶೀರ್ಷಿಕೆ) ಆರ್‌ಡಿಎಕ್ಸ್‌ ಐಇಡಿ ಬಾಂಬ್ ಇಡಲಾಗಿದೆ ಎಂಬ ಅಂಶವಿದೆ. ಆದರೆ, ಪತ್ರದ ಸಾರಾಂಶದಲ್ಲಿ ನಕಲಿ ಪಾಸ್‌ಪೋರ್ಟ್‌ ದಂಧೆ ನಡೆಯುತ್ತಿರುವ ಆರೋಪ ಮಾಡಲಾಗಿದೆ. ಎಲ್‌ಟಿಟಿಇ, ತಮಿಳುನಾಡಿನ ಡಿಎಂಕೆ ಮುಖಂಡ ಉದಯನಿಧಿ ಹಾಗೂ ಐಪಿಎಸ್‌ ಅಧಿಕಾರಿಗಳ ಹೆಸರು ಉಲ್ಲೇಖಿಸಲಾಗಿದೆ. ಗಮನ ಸೆಳೆಯಲು ನಡೆದಿರುವ ಕೃತ್ಯ ಎಂಬುದು ಗೊತ್ತಾಗಿದೆ.

ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಬಾಂಬ್ ಬೆದರಿಕೆ ಸಂದೇಶವು ಜಿಲ್ಲಾಧಿಕಾರಿ ಕಚೇರಿಯ ಇ–ಮೇಲ್‌ಗೆ ಬಂದಿದೆ. ‌ಕೂಡಲೇ ಎಚ್ಚೆತ್ತ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.

ADVERTISEMENT

ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಜಿಲ್ಲಾಧಿಕಾರಿ ಕಚೇರಿಯ ಕೊಠಡಿಗಳನ್ನು ತಪಾಸಣೆ ನಡೆಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ವಾಹನವನ್ನೂ ಸ್ಥಳಕ್ಕೆ‌ ಕರೆಸಲಾಯಿತು. ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು.

ಸುಮಾರು ಹೊತ್ತು ತಪಾಸಣೆ ನಡೆಸಿದ ನಂತರ ಇದು ಹುಸಿ ಬಾಂಬ್‌ ಸಂದೇಶ ಎಂಬುದು ಗೊತ್ತಾಯಿತು.

ಇದೇ ತಿಂಗಳ 12 ರಂದು ಇದೇ ರೀತಿ ಚೆನ್ನೈನ ಬಾಲಕಿಯೊಬ್ಬಳ ಹೆಸರಿನಲ್ಲಿ ಇ–ಮೇಲ್‌ನಲ್ಲಿ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು. ಬಾಂಬ್ ಸ್ಫೋಟ ಮಾಡಲಿದ್ದು, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರನ್ನು ತೆರವುಗೊಳಿಸಬೇಕು ಎಂಬ ಎಚ್ಚರಿಕೆ ಆ‌ ಮೇಲ್‌ನಲ್ಲಿ ಇತ್ತು. 13ರ ಹರೆಯದ ಬಾಲಕಿಯೊಬ್ಬಳು ತಾನಾಗುತ್ತಿರುವ ಲೈಂಗಿಕ ಕಿರುಕುಳ ಹೇಳಿಕೊಳ್ಳಲು ಈ ರೀತಿ ಇ–ಮೇಲ್‌ ಕಳಿಸಿರುವುದು ತಿಳಿದುಬಂದಿತ್ತು. ಇ–ಮೇಲ್‌ ಶೀರ್ಷಿಕೆಯಲ್ಲಿ ಬಾಂಬ್‌ ಬೆದರಿಕೆ ವಿಚಾರವಿದ್ದು, ಸಾರಂಶದಲ್ಲಿ ಕಿರುಕುಳದ ದೂರಿತ್ತು.

ಈಗಾಗಲೇ ಇ–ಮೇಲ್‌ ಜಾಡು ಪತ್ತೆ ಹಚ್ಚಲು ಮುಂದಾಗಿರುವ ಜಿಲ್ಲಾ ಪೊಲೀಸರು ಕೃತ್ಯದ ಹಿಂದೆ ಇರುವಂತಹ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ವಿಶೇಷ ತಂಡ ರಚನೆ ಮಾಡಿದ್ದಾರೆ. ಮೊದಲ ಹುಸಿ ಬಾಂಬ್‌ ಬೆದರಿಕೆ ಘಟನೆಯಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈಗ ಮತ್ತೊಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಒಂದು ತಿಂಗಳಲ್ಲಿ ಎರಡು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.

ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದರಿಂದ ಪೊಲೀಸರು ಶ್ವಾನದೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ ತಪಾಸಣೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.