
ಕೋಲಾರ: ನಗರ ಹೊರವಲಯದಲ್ಲಿರುವ ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇರಿಸಿರುವುದಾಗಿ ಶುಕ್ರವಾರ ಬೆದರಿಕೆ ಇ-ಮೇಲ್ ಸಂದೇಶ ಕಳಿಸಲಾಗಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.
ಜಿಲ್ಲಾಧಿಕಾರಿ ಕಚೇರಿ ಇ-ಮೇಲ್‌ಗೆ ಬೆಳಗ್ಗೆ 6.12ಕ್ಕೆ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಸ್ಫೋಟ ಮಾಡಲಿದ್ದು ಮಧ್ಯಾಹ್ನ 2ರೊಳಗೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರನ್ನು ತೆರವುಗೊಳಿಸಬೇಕು ಎಂಬ ಎಚ್ಚರಿಕೆ ಸಂದೇಶ ಆ ಮೇಲ್‌ನಲ್ಲಿ ಇತ್ತು.
ಈ ವಿಚಾರ ಜಿಲ್ಲಾಧಿಕಾರಿ ಆಪ್ತ ಸಹಾಯಕರ ಮೂಲಕ ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಜಿಲ್ಲಾಡಳಿತ ಭವನದಲ್ಲಿದ್ದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪೊಲೀಸರು ಹೊರಗೆ ಕಳಿಸಿ ತಮ್ಮ ಸುಪರ್ದಿಗೆ ಪಡೆದರು.
ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಪರಿಶೀಲನೆ ಬಳಿಕ ಪೊಲೀಸರು ಕಂಪ್ಯೂಟರ್ ವಶಕ್ಕೆ ಪಡೆದು ತಪಾಸಣೆ ನಡೆಸಿದರು. ಅಲ್ಲದೆ, ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳನ್ನೂ ಇಂಚಿಂಚು ಪರಿಶೀಲಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ವಾಹನವನ್ನೂ ಸ್ಥಳಕ್ಕೆ ಕರೆಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಈ ವಿಚಾರ ಗೊತ್ತಾಗುತ್ತಿದ್ದಂತೆ ಹೊರಬಂದರು. ನಂತರ ಹೊರಗಡೆ ಸಭೆ ನಡೆಸಿದರು. ಕೊನೆಗೆ ಇದು ಹುಸಿ ಬಾಂಬ್ ಬೆದರಿಕೆ ಇ–ಮೇಲ್ ಎಂಬುದು ಗೊತ್ತಾಯಿತು. ಬೀದರ್ ಜಿಲ್ಲಾಧಿಕಾರಿ ಕಚೇರಿಗೂ ಇದೇ ರೀತಿಯ ಹುಸಿ ಬೆದರಿಕೆ ಇ-ಮೇಲ್ ಸಂದೇಶ ಹೋಗಿದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಹೊರರಾಜ್ಯದ ಇ–ಮೇಲ್: ಎಸ್‌ಪಿ
'ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಇ-ಮೇಲ್ ವಿಷಯ ಕಾಲಂನಲ್ಲಿ ಮಾತ್ರ ಆರ್‌ಡಿಎಕ್ಸ್ ಐಇಡಿ ಬಾಂಬ್ ಇಡಲಾಗಿದೆ ಎಂಬ ಅಂಶವಿದೆ. ಪತ್ರದ ಸಾರಾಂಶದಲ್ಲಿ ಕಿರುಕುಳಕ್ಕೆ ಸಂಬಂಧಿಸಿದ ವಿಚಾರ ಇದೆ. ಹೊರರಾಜ್ಯದಿಂದ ಈ ಇ-ಮೇಲ್ ಬಂದಿದೆ. ಜಿಲ್ಲಾಧಿಕಾರಿ ಕಚೇರಿ ಪರಿಶೀಲನೆ ನಡೆಸಿದ್ದು ಯಾವುದೇ ಸ್ಫೋಟಕ ಅಂಶ ಪತ್ತೆ ಆಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಇ–ಮೇಲ್ ಆಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ' ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. 'ಪ್ರಜಾವಾಣಿ'ಗೆ ತಿಳಿಸಿದರು.
ಲೈಂಗಿಕ ಕಿರುಕುಳದಿಂದ ಬೇಸತ್ತ ಬಾಲಕಿಯ ಕೃತ್ಯ
ಚೆನ್ನೈನ ಬಾಲಕಿಯೊಬ್ಬಳು ತಾನಗಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಗಮನ ಸೆಳೆಯಲು ಈ ರೀತಿ ಇ–ಮೇಲ್ ಕಳಿಸಿರುವುದು ತಿಳಿದುಬಂದಿದೆ. ಇ–ಮೇಲ್ ಶೀರ್ಷಿಕೆಯಲ್ಲಿ ಬಾಂಬ್ ಬೆದರಿಕೆ ವಿಚಾರವಿದ್ದು ಸಾರಂಶದಲ್ಲಿ ಕಿರುಕುಳದ ದೂರಿದೆ. ಚೆನ್ನೈನ ಮೈಲಾಪುರದ 13 ವರ್ಷದ ಬಾಲಕಿಯ ಹೆಸರಿನಲ್ಲಿ ಇ–ಮೇಲ್ ಜಿಲ್ಲಾಧಿಕಾರಿ ಕಚೇರಿಗೆ ಬಂದಿದೆ. ತನ್ನ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಸಾರಂಶದಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿ ಹಾಗೂ ಮಾಜಿ ಶಾಸಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.