ಡಿ.ಚಂದರ್
ಕೆಜಿಎಫ್: ರಾಬರ್ಟಸನ್‌ಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ಸಹಿಯುಳ್ಳ ಪ್ರಮಾಣಪತ್ರಗಳನ್ನು ನಕಲಿ ಮಾಡಿ ವಂಚಿಸುತ್ತಿದ್ದ ಆರೋಪದ ಮೇರೆಗೆ ಆಸ್ಪತ್ರೆಯ ಡಿ ಗ್ರೂಪ್ ನೌಕರನ ಮೇಲೆ ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ಡಿ.ಚಂದರ್ ಆರೋಪಿ. ಆರೋಪಿಯಿಂದ ನಕಲಿ ಮಾಡಲು ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಚಂದರ್ ಆಸ್ಪತ್ರೆ ವೈದ್ಯರ ನಕಲಿ ಪ್ರಮಾಣ ಪತ್ರವನ್ನು ವಿತರಣೆ ಮಾಡುತ್ತಿದ್ದಾನೆ ಎಂಬ ದೂರಿನ ಹಿನ್ನೆಲೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುರೇಶ್ ಕುಮಾರ್, ಸಹಾಯಕ ಆಡಳಿತಾಧಿಕಾರಿ ಶ್ರೀಧರ್, ಕಚೇರಿ ಅಧೀಕ್ಷಕ ಸುಬ್ರಹ್ಮಣಿ ಸೇರಿದಂತೆ ಹಲವರ ಸಮ್ಮುಖದಲ್ಲಿ ಈಚೆಗೆ ಅವರ ಬೈಕ್ ತಪಾಸಣೆ ಮಾಡಲಾಯಿತು. ಬೈಕ್‌ನಲ್ಲಿ ವೈದ್ಯರಿಂದ ಸಹಿ ಪಡೆದಿರುವ ರಜೆಯ ವೈದ್ಯಕೀಯ ಪ್ರಮಾಣ ಪತ್ರ. ಆಸ್ಪತ್ರೆಯ 13 ಖಾಲಿ ವೈದ್ಯಕೀಯ ಪ್ರಮಾಣ ಪತ್ರ ಇರುವ ಪುಸ್ತಕ. ವೈದ್ಯರ ಸಹಿ ಮತ್ತು ಮೊಹರು ಇರುವ ವಯಸ್ಸಿನ ದೃಢೀಕರಣ ಪತ್ರ. ಆಸ್ಪತ್ರೆಯ ಔಷಧಿಗಳು, ಖಾಸಗಿ ಸಂಸ್ಥೆಯ ಲೆಟರ್ ಹೆಡ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ನಂತರ ವಿಚಾರಣೆ ನಡೆಸಿದಾಗ, ಆರೋಪಿಯು ಪ್ರಮಾಣ ಪತ್ರವನ್ನು ನಕಲು ಮಾಡಿ ದಾಖಲೆಗೆ ₹100 ರಂತೆ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.