ಮುಳಬಾಗಿಲು: ಆಸೆ ಇಟ್ಟುಕೊಂಡು, ಬಂಡವಾಳ ಹಾಕಿ ಬೆಳೆದ ಚೆಂಡು ಹೂವಿನ ಬೆಲೆ ನೆಲ ಕಚ್ಚಿದೆ. ಕೈಸುಟ್ಟುಕೊಂಡ ರೈತ ಕಷ್ಟ ಪಟ್ಟು ತಾ ಬೆಳೆದ ತುಂಬಿದ ಹೊಲಕ್ಕೆ ತಾನೇ ದನ–ಕರುಗಳನ್ನು ಬಿಟ್ಟು ಮೇಯಿಸುತ್ತಿದ್ದಾನೆ.
ಚೆಂಡು ಹೂಗೆ ಮಾರುಕಟ್ಟಿಯಲ್ಲಿ ಒಳ್ಳೇ ಬೆಲೆ ಇದೆ ಎನ್ನುವುದನ್ನು ತಿಳಿದು ತಾಲ್ಲೂಕಿನಲ್ಲಿ ಸುಮಾರು ನೂರಾರು ಎಕರೆಗಳಲ್ಲಿ ಅನೇಕ ರೈತರು ಚೆಂಡು ಹೂ ಬೆಳೆದಿದ್ದಾರೆ. ಬಹುತೇಕ ಎಲ್ಲಾ ಕಡೆಗಳಲ್ಲಿ ಚೆಂಡು ಹೂ ಅರಳಿ ನಳನಳಿಸುತ್ತಿವೆ, ಸಮೃದ್ಧವಾಗಿ ಬೆಳೆದ ಹೂಗಳು ನೋಡುಗರನ್ನು ಸೆಳೆಯುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿದು ರೈತರ ಕಣ್ಣಲ್ಲಿ ನೀರಿಳಿಯುತ್ತಿದೆ. ಹೂವುಗಳನ್ನು ಕೀಳಿ, ಮಾರುಕಟ್ಟೆಗೆ ಸಾಗಿಸಿದರೂ ಬಂಡವಾಳದ ಮಾತಿರಲಿ, ಮಾರುಕಟ್ಟೆಗೆ ಸಾಗಿಸಲು ಕರ್ಚಾದ ಹಣವೂ ವಾಪಸ್ಸು ಬರಲಾರದು ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ ರೈತ.
ತಾಲ್ಲೂಕಿನ ನಂಗಲಿ ಹಾಗೂ ನೆರೆಯ ಚೆನ್ನೈ ಮಾರುಕಟ್ಟೆಗಳು ಸಮೀಪದಲ್ಲಿರುವ ಕಾರಣದಿಂದ ಬಹುತೇಕ ರೈತರು ಚೆಂಡು ಹೂಗಳನ್ನು ಬೆಳೆಯುವುದು ಸಾಮಾನ್ಯ. ಇತ್ತೀಚೆಗೆ ಹಬ್ಬದ ಸಮಯಗಳಲ್ಲಿ ಬೆಲೆ ಚೆನ್ನಾಗೇ ಇತ್ತು. ಇದೀಗ ಸುಮಾರು ತಿಂಗಳಿನಿಂದ ಈಚೆ ಚೆಂಡು ಹೂಗಳಿಗೆ ಬೆಲೆಯೇ ಇಲ್ಲ. ಹೀಗಾಗಿ ಕೆಲ ರೈತರು ಹೂಗಳನ್ನು ತೋಟಗಳಲ್ಲಿಯೇ ಬಾಡಲು ಬಿಟ್ಟರೆ, ಕೆಲವರು ಮೇಯಲು ಜಾನುವಾರಗಳನ್ನು ಬಿಡುತ್ತಿದ್ದಾರೆ.
ನಂಗಲಿ ಹಾಗೂ ಚೆನ್ನೈ ಮಾರುಕಟ್ಟೆಯಲ್ಲಿ ಒಂದು ಕೇಜಿ ಚೆಂಡು ಹೂ ಕೇವಲ ₹10ಗಳಿಗೆ ಮಾರಾಟವಾಗುತ್ತಿದೆ. ಇದರಿಂದ ತೋಟದಿಂದ ಹೂಗಳನ್ನು ಕೀಳುವ ಕೂಲಿ, ಸಾಗಾಟ ವೆಚ್ಚ, ಮಾರುಕಟ್ಟೆಯ ಕಮಿಷನ್ ಮತ್ತಿತರ ಖರ್ಚುಗಳಿಗೆ ಆಗುತ್ತಿಲ್ಲ. ತಾಲ್ಲೂಕಿನ ನಂಗಲಿ, ಮರವೇಮನೆ, ಸುನುಪಕುಂಟೆ, ಬೈರಕೂರು, ತಿಮ್ಮರಾವುತ್ತನಹಳ್ಳಿ, ಹೆಬ್ಬಣಿ, ಗೊಲ್ಲಹಳ್ಳಿ, ಗಡ್ಡೂರು, ಮಣಿಘಟ್ಟ ಮಿಟ್ಟೆ, ಗೂಕುಂಟೆ ಮತ್ತಿತರ ಕಡೆಗಳಲ್ಲಿ ನೂರಾರು ಎಕರೆಗಳಲ್ಲಿ ಚೆಂಡು ಹೂ ಸಮೃದ್ಧವಾಗಿ ಬೆಳೆದಿದ್ದು ಕೆಲವು ಕಡೆ ಹಸುಗಳನ್ನು ಬಿಟ್ಟು ಮೇಯಿಸುತ್ತಿದ್ದರೆ ಕೆಲವು ಕಡೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಚಿಂತಿಸುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚೆಂಡು ಬೆಳೆದಿದ್ದೇವೆ. ಕಣ್ಣು ಕೋರೈಸುವಂತೆ ಚೆಂಡೂ ಹೂವು ನಳನಳಿಸುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲ. ಹೀಗಾಗಿ, ಇದುವರೆಗೂ ತೋಟದಲ್ಲಿ ಒಂದು ಬಾರಿಯೂ ಕೊಯ್ಲು ನಡೆಸಿಲ್ಲ ಎಂದು ರೈತರಾದ ಕೌಂಡಿನ್ಯ ಶಂಕರಪ್ಪ ಹಾಗೂ ರಾಮಪ್ಪ ಅಳಲು ತೋಡಿಕೊಂಡರು.
ಹೂಗಳಿಂದ ಬದುಕು ಕಟ್ಟಿಕೊಳ್ಳಬಹುದು ಎಂದು ನಂಬಿಕೊಂಡಿದ್ದೆವು. ಹಾಕಿದ ಬಂಡವಾಳವೂ ಸಿಗದೆ ತಲೆ ಮೇಲೆ ಸಾಲ ಹೊರುವಂತಾಗಿದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆಯಾದರೂ ಘೋಷಿಸಿ ಹೂ ಬೆಳೆಗಾರರ ಬದುಕು ಬೀದಿಗೆ ಬೀಳುವುದನ್ನು ತಡೆಯಬೇಕು ಎಂದು ರೈತ ಗಟ್ಟಣ್ಣ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.