ADVERTISEMENT

ಅಧಿಕಾರಿಗಳ ಜತೆ ರೈತರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 15:29 IST
Last Updated 4 ಏಪ್ರಿಲ್ 2020, 15:29 IST

ಕೋಲಾರ: ತಾಲ್ಲೂಕಿನ ಸೀತಿಹೊಸೂರು ಗ್ರಾಮದ ಬಳಿ ಕೆ.ಸಿ ವ್ಯಾಲಿ ಕಾಲುವೆಗಳಲ್ಲಿ ನಡೆಯುತ್ತಿರುವ ನೀರು ಕಳವು ತಡೆಯಲು ಹೋಗಿದ್ದ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ರೈತರು ಶನಿವಾರ ವಾಗ್ವಾದ ನಡೆಸಿ ಹಲ್ಲೆಗೆ ಯತ್ನಿಸಿದ್ದಾರೆ.

ಸೀತಿಹೊಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಕಾಲುವೆಗಳು ಮತ್ತು ಕೆರೆಗಳಿಗೆ ಅಕ್ರಮವಾಗಿ ಪೈಪ್‌ಲೈನ್‌ ಅಳವಡಿಸಿ ಕೃಷಿ ಚಟುವಟಿಕೆಗೆ ನೀರು ಬಳಸಿಕೊಳ್ಳುತ್ತಿರುವ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು.

ಈ ದೂರು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ವೇಮಗಲ್ ಹೋಬಳಿ ಉಪ ತಹಶೀಲ್ದಾರ್ ಹೇಮಲತಾ ಅವರ ನೇತೃತ್ವದಲ್ಲಿ ಅಕ್ರಮ ನೀರಿನ ಸಂಪರ್ಕ ಕಡಿತಗೊಳಿಸಲು ಮಧ್ಯಾಹ್ನ ಸೀತಿಹೊಸೂರು ಬಳಿಗೆ ಹೋಗಿದ್ದರು. ಈ ವಿಷಯ ತಿಳಿದ ಸೀತಿಹೊಸೂರು, ಜಂಜಿಮಲ್ಲೆ, ಸೀತಿ, ಹೊಲೇರಹಳ್ಳಿ, ಮದ್ದೇರಿ ಮತ್ತು ತಿಪ್ಪೇನಹಳ್ಳಿಯ ರೈತರು ಅಧಿಕಾರಿಗಳಿಗೆ ಘೇರಾವ್‌ ಹಾಕಿದರು.

ADVERTISEMENT

‘ಕೆ.ಸಿ ವ್ಯಾಲಿ ನೀರು ನಂಬಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಮಾಡಿದ್ದೇವೆ. ನಾವೂ ರೈತರೇ. ನಮ್ಮ ಭಾಗದಲ್ಲಿ ನೀರಿಲ್ಲದೆ ಪರದಾಡುತ್ತಿದ್ದೇವೆ. ಕೆ.ಸಿ ವ್ಯಾಲಿ ನೀರಿನಿಂದ ಜೀವನಕ್ಕೆ ದಾರಿ ಕಂಡುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನೀರು ಕಡಿತಗೊಳಿಸಬಾರದು’ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಇದರಿಂದ ಗಾಬರಿಯಾದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಅಲ್ಲಿಂದ ಕಾಲ್ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.