ADVERTISEMENT

ಕೋಲಾರ: 26ಕ್ಕೆ ರೈತರ ಟ್ರ್ಯಾಕ್ಟರ್‌ ಪರೇಡ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 13:10 IST
Last Updated 16 ಜನವರಿ 2021, 13:10 IST

ಕೋಲಾರ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಜ.26ರ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್‌ಗಳ ಬೃಹತ್‌ ಪರೇಡ್‌ ನಡೆಸುತ್ತೇವೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಇಲ್ಲಿ ಶನಿವಾರ ಸಂಘದ ಸಭೆಯಲ್ಲಿ ಮಾತನಾಡಿ, ‘ಕೇಂದ್ರದ ಜನವಿರೋಧಿ ಸುಗ್ರೀವಾಜ್ಞೆಗೆ ಪೂರಕವಾಗಿ ರಾಜ್ಯ ಸರ್ಕಾರ ತೆರೆಮರೆಯಲ್ಲಿ ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ. ಇದರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ’ ಎಂದರು.

‘ಗಣರಾಜ್ಯೋತ್ಸವದ ಪರೇಡ್‌ಗೆ ಪರ್ಯಾಯವಾಗಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲೂ ರೈತರ ಶಕ್ತಿ ಪ್ರದರ್ಶನ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧ್ವಜಾರೋಹಣ ನೆರವೇರಿಸಿದ ನಂತರ ಕೆ.ಆರ್.ಪುರದಿಂದ ಪರೇಡ್ ಆರಂಭವಾಗುತ್ತದೆ. ಪರೇಡ್‌ಗೆ ಪ್ರತಿ ಜಿಲ್ಲೆಯ ರೈತರು ಬೆಂಬಲ ಸೂಚಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಸುಪ್ರೀಂಕೋರ್ಟ್ ಕೃಷಿ ವಿರೋಧಿ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಿದೆ. ಕಾಯ್ದೆಗಳ ಸಾಧಕಬಾಧಕ ಸಂಬಂಧ ವರದಿ ಸಲ್ಲಿಸಲು ಸಮಿತಿ ರಚಿಸಿದ್ದು, ಅನುಮಾನ ಕಾಡುತ್ತಿದೆ. ದೇಶದಲ್ಲಿ ಬಿಜೆಪಿಯಿಲ್ಲ, ಬದಲಿಗೆ ಮೋದಿ ಅಭಿಮಾನ ಬಳಗ ಕೆಲಸ ಮಾಡುತ್ತಿದೆ. ಸರ್ಕಾರ ಬಂಡವಾಳಶಾಹಿಗಳ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ದೇಶವನ್ನು ಅದಾನಿ, ಅಂಬಾನಿಯ ಆಳ್ವಿಕೆಗೆ ಬಿಟ್ಟುಕೊಡುವ ಸಂಚು ನಡೆಯುತ್ತಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.