ADVERTISEMENT

ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ವ್ಯಾಪಾಕ ಭ್ರಷ್ಟಾಚಾರ: ತನಿಖೆಗೆ ರೈತ ಸಂಘ ಒತ್ತಾಯ

ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ವ್ಯಾಪಾಕ ಭ್ರಷ್ಟಾಚಾರ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 15:35 IST
Last Updated 25 ಜೂನ್ 2021, 15:35 IST
ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ತನಿಖೆ ಮಾಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು
ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ತನಿಖೆ ಮಾಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು   

ಕೋಲಾರ: ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಅವರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಇಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು.

‘ನಾರಾಯಣಗೌಡ ಅವರು ಸುಮಾರು 20 ವರ್ಷಗಳಿಂದ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿರ್ಮಿತಿ ಕೇಂದ್ರದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ. ನಾರಾಯಣಗೌಡ ಅವರೇ ಈ ಅಕ್ರಮಗಳ ರೂವಾರಿ’ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಳೆದ 20 ವರ್ಷದಲ್ಲಿ ನಿರ್ಮಿತಿ ಕೇಂದ್ರಕ್ಕೆ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾಗಿದೆ. ಸುದೀರ್ಘ ಅವಧಿಗೆ ಜಿಲ್ಲೆಯಲ್ಲೇ ಕರ್ತವ್ಯದಲ್ಲಿರುವ ನಾರಾಯಣಗೌಡ ಅವರು ಈ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ನಿರ್ಮಿತಿ ಕೇಂದ್ರದ ವತಿಯಿಂದ ಕೈಗೊಂಡಿರುವ ಸರ್ಕಾರಿ ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿಗಳ ಕಾಂಪೌಂಡ, ಸಮುದಾಯ ಭವನ, ಸಿಮೆಂಟ್ ರಸ್ತೆ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ. ನಾರಾಯಣಗೌಡ ಅವರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿಯ ಗುತ್ತಿಗೆ ಪಡೆದು ಅಕ್ರಮ ಎಸಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಜನಪ್ರತಿನಿಧಿಗಳ ರಕ್ಷಣೆ: ‘ನಾರಾಯಣಗೌಡರ ಅಕ್ರಮಗಳ ಸಂಗತಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಗೊತ್ತಿದೆ. ಆದರೂ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಭ್ರಷ್ಟ ಅಧಿಕಾರಿಗೆ ಜನಪ್ರತಿನಿಧಿಗಳೇ ರಕ್ಷಣೆ ನೀಡುತ್ತಿದ್ದಾರೆ. ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಕಿಕ್‌ಬ್ಯಾಕ್‌ ಪಡೆದು ನಾರಾಯಣಗೌಡರ ಅಕ್ರಮಕ್ಕೆ ಕೈಜೋಡಿಸಿದ್ದಾರೆ’ ಎಂದು ಸಂಘಟನೆ ಸದಸ್ಯರು ಕಿಡಿಕಾರಿದರು.

‘20 ವರ್ಷಗಳಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಉನ್ನತ ತನಿಖೆ ನಡೆಸಬೇಕು. ನಾರಾಯಣಗೌಡರನ್ನು ಶೀಘ್ರವೇ ವರ್ಗಾವಣೆ ಮಾಡಬೇಕು. ನಿರ್ಮಿತಿ ಕೇಂದ್ರದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಹನುಮಯ್ಯ, ಚಾಂದ್‌ಪಾಷಾ, ಕಿರಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.