ADVERTISEMENT

ಗೂಂಡಾಗಿರಿಗೆ ಹೆದರದೆ ಪ್ರಕರಣ ದಾಖಲಿಸಿ: ಸಚಿವ ಈಶ್ವರಪ್ಪ ಸೂಚನೆ

ಹಳೇ ಪಂಪ್‌– ಮೋಟರ್‌ ಮರುಬಳಕೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 13:55 IST
Last Updated 27 ಏಪ್ರಿಲ್ 2020, 13:55 IST
ಕುಡಿಯುವ ನೀರು ಹಾಗೂ ನರೇಗಾ ಕಾಮಗಾರಿಗಳ ಸಂಬಂಧ ಕೋಲಾರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.
ಕುಡಿಯುವ ನೀರು ಹಾಗೂ ನರೇಗಾ ಕಾಮಗಾರಿಗಳ ಸಂಬಂಧ ಕೋಲಾರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.   

ಕೋಲಾರ: ‘ನೀರು ಬತ್ತಿರುವ ಕೊಳವೆ ಬಾವಿಗಳಲ್ಲಿನ ಪಂಪ್‌ ಮೋಟರ್‌ ಹೊರ ತೆಗೆದು ಮರುಬಳಕೆ ಮಾಡಲು ಅಡ್ಡಿಪಡಿಸುವವರ ಗೂಂಡಾಗಿರಿಗೆ ಹೆದರದೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಆದೇಶಿಸಿದರು.

ಕುಡಿಯುವ ನೀರು ಹಾಗೂ ನರೇಗಾ ಕಾಮಗಾರಿಗಳ ಸಂಬಂಧ ಇಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ನೀರು ಬತ್ತಿದ ಕೊಳವೆ ಬಾವಿಗಳ ಪಂಪ್‌ ಮೋಟರ್‌ಗಳ ಬಗ್ಗೆ ಅಧಿಕಾರಿಗಳ ಬಳಿ ಲೆಕ್ಕಪತ್ರವೇ ಇಲ್ಲ’ ಎಂದರು.

‘ನೀರು ಬತ್ತಿದ ಕೊಳವೆ ಬಾವಿಗಳಲ್ಲಿನ ಪಂಪ್ ಮೋಟರ್‌ಗಳನ್ನು ಪೊಲೀಸ್‌ ಭದ್ರತೆಯಲ್ಲಿ ಹೊರ ತೆಗೆದು ಗ್ರಾಮ ಪಂಚಾಯಿತಿಗಳಲ್ಲಿ ದಾಸ್ತಾನು ಮಾಡಿ. ಇದಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ’ ಎಂದು ಸೂಚಿಸಿದರು.

ADVERTISEMENT

‘ಸ್ಥಗಿತಗೊಂಡಿರುವ ಕೊಳವೆ ಬಾವಿಗಳಿಂದ ಪಂಪ್‌ ಮೋಟರ್‌ ಮೇಲಕ್ಕೆತ್ತಲು ಪಟ್ಟಭದ್ರರು ಬಿಡುವುದಿಲ್ಲ. ಈ ವಿಚಾರವಾಗಿ ಗೂಂಡಾಗಿರಿ ನಡೆಯುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಂಚನೆಯಾಗುತ್ತಿದ್ದು, ಇದನ್ನು ತಡೆಯಬೇಕು’ ಎಂದು ಶ್ರೀನಿವಾಸಪುರ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಸಲಹೆ ನೀಡಿದರು.

‘ಬೇಸಿಗೆ ಕಾರಣಕ್ಕೆ ನೀರಿನ ಸಮಸ್ಯೆ ಗಂಭೀರವಾಗಿದ್ದು, ಗ್ರಾಮಗಳಲ್ಲಿ ಬಲಾಢ್ಯರು ದೊಡ್ಡ ತೊಟ್ಟಿಗಳಲ್ಲಿ ಅಕ್ರಮವಾಗಿ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಬಡವರ ಮನೆಗೆ ನೀರು ಹೋಗುವುದೇ ಇಲ್ಲ. ಈ ತಾರತಮ್ಯಕ್ಕೆ ಕಡಿವಾಣ ಹಾಕಬೇಕು. ಮೊದಲು ಸಂಪ್‌ ಮುಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದಕ್ಕೆ ದನಿಗೂಡಿಸಿದ ಕೆಜಿಎಫ್‌ ಶಾಸಕಿ ಎಂ.ರೂಪಕಲಾ, ‘ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರೇ ಈ ರೀತಿ ಗೂಂಡಾಗಿರಿ ಮಾಡುತ್ತಿದ್ದಾರೆ’ ಎಂದರು.

‘ನಮ್ಮ ತಾಲ್ಲೂಕಿನಲ್ಲಿ ಹಳೆಯ ಪಂಪ್‌ ಮೋಟರ್‌ಗಳನ್ನೇ ಹೊಸ ಕೊಳವೆ ಬಾವಿಗಳಿಗೆ ಬಳಸುತ್ತಿದ್ದು, ಏನೂ ತೊಂದರೆಯಿಲ್ಲ. ಈ ಕೆಲಸವನ್ನು ಮಾದರಿಯಾಗಿ ತೆಗೆದುಕೊಂಡಿದ್ದೇವೆ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿವರಿಸಿದರು.

ಜಿಲ್ಲೆಯಲ್ಲಿ ಅಕ್ರಮ: ‘ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಜಿಲ್ಲೆಯಲ್ಲಿ ಆಗಿರುವಷ್ಟು ಅಕ್ರಮ ರಾಜ್ಯದ ಬೇರೆಲ್ಲೂ ಆಗಿಲ್ಲ. ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ನೆಚ್ಚಿಕೊಂಡಿರುವ ಜಿಲ್ಲೆಗೆ ನೀರಿನ ಘಟಕಗಳ ಅಗತ್ಯ ಹೆಚ್ಚಿದೆ. ಆದರೆ, ಅಧಿಕಾರಿಗಳು ನೀರಿನ ಘಟಕಗಳ ನಿರ್ವಹಣೆ ನಿರ್ಲಕ್ಷಿಸಿದ್ದಾರೆ’ ಎಂದು ಸಚಿವ ಈಶ್ವರಪ್ಪ ಕೆಂಡಾಮಂಡಲರಾದರು.

‘ನೀರಿನ ಘಟಕಗಳ ದುರಸ್ತಿ ವಿಚಾರದಲ್ಲಿ ಅಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸುತ್ತಿದ್ದಾರೆ. ಏಜೆನ್ಸಿಯವರ ಹಿತರಕ್ಷಣೆಗಾಗಿ ಈ ರೀತಿ ಮಾಡಿದರೆ ಹೇಗೆ? ಏಜೆನ್ಸಿಯವರು ಘಟಕಗಳನ್ನು ರಿಪೇರಿ ಮಾಡದಿದ್ದರೆ ನೋಟಿಸ್‌ ಕೊಟ್ಟು ಗುತ್ತಿಗೆ ರದ್ದುಪಡಿಸಿ. ಪ್ರತಿ ಗ್ರಾ.ಪಂಗೆ ₹ 3 ಸಾವಿರ ಕೊಟ್ಟು ಘಟಕ ರಿಪೇರಿ ಮಾಡಿಸಿ’ ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್‌.ಮುನಿಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಆರ್‌.ಚೌಡರೆಡ್ಡಿ, ವೈ.ಎ.ನಾರಾಯಣಸ್ವಾಮಿ, ನಸೀರ್‌ ಅಹಮ್ಮದ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಉಪಾಧ್ಯಕ್ಷೆ ಯಶೋದಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಎ.ಅತೀಕ್‌, ನರೇಗಾ ಆಯುಕ್ತ ಅನಿರುದ್ಧ್‌ ಶ್ರವಣ್‌, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಆಯುಕ್ತ ಡಾ.ವಿಶಾಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.