ADVERTISEMENT

ದೇವಾಲಯ ಅಭಿವೃದ್ಧಿಗೆ ಹಣಕಾಸು ನೆರವು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:33 IST
Last Updated 11 ಫೆಬ್ರುವರಿ 2020, 13:33 IST
ಕೋಲಾರ ತಾಲ್ಲೂಕಿನ ಕಾಕಿನತ್ತ ಗ್ರಾಮದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣಕಾಸು ನೆರವಿನ ಚೆಕ್‌ ನೀಡಿದರು.
ಕೋಲಾರ ತಾಲ್ಲೂಕಿನ ಕಾಕಿನತ್ತ ಗ್ರಾಮದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣಕಾಸು ನೆರವಿನ ಚೆಕ್‌ ನೀಡಿದರು.   

ಕೋಲಾರ: ‘ಯೋಜನೆಯಡಿ ಜಿಲ್ಲೆಯಾದ್ಯಂತ ವಿವಿಧ ಸಾಮಾಜಿಕ ಕಾರ್ಯ ಕೈಗೊಂಡಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಕಾಕಿನತ್ತ ಗ್ರಾಮದಲ್ಲಿ ಮಂಗಳವಾರ ಧರ್ಮರಾಯಸ್ವಾಮಿ ಹಾಗೂ ದ್ರೌಪದಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಹಣಕಾಸು ನೆರವು ವಿತರಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಸಾಮಾಜಿಕ, ರೈತಪರ ಹಾಗೂ ಮಹಿಳಾ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಕಿನತ್ತ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಹ್ನಿಕುಲ ಸಮುದಾಯದವರಿದ್ದು, ಅವರ ಆರಾಧ್ಯ ದೈವ ಧರ್ಮರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಧರ್ಮಸ್ಥಳ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಅನಾಥರು ಹಾಗೂ ಅಬಲರನ್ನು ಗುರುತಿಸಿ ಮಾಸಿಕ ವೇತನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವೆಡೆ ಗೌರವಧನದಡಿ ಶಿಕ್ಷಕರ ನೇಮಕಕ್ಕೂ ನೆರವು ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಪರಿಸರ ಸಂರಕ್ಷಣೆಗಾಗಿ ಗಿಡ ಮರ ಬೆಳೆಸಲು ಯೋಜನೆ ಕಾರ್ಯೋನ್ಮುಖವಾಗಿದೆ’ ಎಂದು ವಿವರಿಸಿದರು.

ಕೆರೆ ಪುನಶ್ಚೇತನ: ‘ತಾಲ್ಲೂಕಿನ ಅರಾಭಿಕೊತ್ತನೂರು ಸೇರಿದಂತೆ ವಿವಿಧ ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಳಿಸಲಾಗಿದೆ. ಕೆಲ ಕೆರೆಗಳಲ್ಲಿ ಹೂಳೆತ್ತಿದ್ದರಿಂದ ನೀರು ಸಂಗ್ರಹವಾಗಿದೆ. ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಿದ್ದೇವೆ. ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಸಮಾಜದಲ್ಲಿ ಸಂಸ್ಕಾರ, ನೈತಿಕ ಮೌಲ್ಯ ವೃದ್ಧಿಗೆ ಶ್ರಮಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸಮುದಾಯದ ಶ್ರದ್ಧಾ ಕೇಂದ್ರಗಳಾದ ದೇವಾಲಯಗಳಲ್ಲಿ ಪರಿಸರ ಸ್ವಚ್ಛವಾಗಿರಿಸಲು ಯೋಜನೆ ಮುಂದಾಗಿದ್ದು, ದೇವಾಲಯಗಳಿಗೆ ಕಸದ ಬುಟ್ಟಿ ವಿತರಿಸಲಾಗುತ್ತಿದೆ. ದೇವಾಲಯಗಳಲ್ಲಿ ಸ್ವಚ್ಛತೆ ಕಾಪಾಡಿ’ ಎಂದು ಮನವಿ ಮಾಡಿದರು.

ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್, ದೇವಾಲಯ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು, ಕಾಕಿನತ್ತ ಧರ್ಮಸ್ಥಳ ಯೋಜನೆ ಒಕ್ಕೂಟದ ಅಧ್ಯಕ್ಷ ಮೂರ್ತಿ, ತೊಟ್ಲಿ ಒಕ್ಕೂಟದ ಅಧ್ಯಕ್ಷ ಆನಂದ್, ಮೇಲ್ವಿಚಾರಕ ರಾಜೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.