ಕೆಜಿಎಫ್: ತಾಲ್ಲೂಕಿನ ಸ್ವಾಭಿಮಾನ ವೇದಿಕೆಯ ಮುಖ್ಯಸ್ಥ ಮೋಹನಕೃಷ್ಣ ಅವರ ಕೋಳಿಫಾರಂಗೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು 9 ಸಾವಿರ ಕೋಳಿ ಮರಿಗಳು ಮೃತಪಟ್ಟಿದ್ದು, ಸುಮಾರು ₹15 ಲಕ್ಷ ನಷ್ಟ ಸಂಭವಿಸಿದೆ.
ತಾಲ್ಲೂಕಿನ ನೆರ್ನಹಳ್ಳಿ ಗ್ರಾಮದ ಬಳಿ ಇರುವ ಅವರ ಕೋಳಿ ಫಾರಂನಲ್ಲಿ ರಾತ್ರಿ 11.40ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಫಾರಂನ ಹಿಂಭಾಗದಿಂದ ಬಂದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಕಿ ಅನಾಹುತದಲ್ಲಿ ಸುಮಾರು 9 ಸಾವಿರ ಕೋಳಿ ಮರಿಗಳು ಮೃತಪಟ್ಟಿದ್ದು, ಹಲವು ಪರಿಕರಗಳು ಸುಟ್ಟು ಭಸ್ಮವಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಉತ್ತರ ಭಾರತದ ಕಾರ್ಮಿಕರು ಫಾರಂನಲ್ಲಿದ್ದು, ಅವರು ಭೀತಿಗೊಂಡು ಓಡಿಹೋಗಿದ್ದಾರೆ. ನಂತರ ಗ್ರಾಮಸ್ಥರ ಜೊತೆಗೂಡಿ ಬೆಂಕಿ ಆರಿಸಲಾಯಿತು. ನಗರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿತು.
ಘಟನೆಯಿಂದ ಕುಪಿತಗೊಂಡ ಮೋಹನಕೃಷ್ಣ ಅವರ ನೂರಾರು ಬೆಂಬಲಿಗರು ರಾತ್ರಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ದುಷ್ಕರ್ಮಿಗಳಿಗೆ ಬುದ್ಧಿ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಅವರನ್ನು ಸಮಾಧಾನ ಮಾಡಿ ಕಳಿಸಲಾಯಿತು.
ರಾಮಸಾಗರ ಗ್ರಾಮ ಪಂಚಾಯಿತಿಯ ರಾಜಕೀಯ ವಿದ್ಯಾಮಾನಗಳಿಂದ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂಬ ಶಂಕೆ ಇದೆ. ಈ ಸಂಬಂಧವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಯಾರನ್ನು ನಿರ್ಧಿಷ್ಟವಾಗಿ ಹೆಸರಿಸಿಲ್ಲ ಎಂದು ಮುಖಂಡ ಮೋಹನಕೃಷ್ಣ ತಿಳಿಸಿದ್ದಾರೆ.
ಬೇತಮಂಗಲ ಸರ್ಕಲ್ ಇನ್‌ಸ್ಪೆಕ್ಟರ್ ರಂಗಶಾಮಯ್ಯ, ಸಬ್ ಇನ್‌ಸ್ಪೆಕ್ಟರ್ ಗುರುರಾಜ ಚಿಂತಕಾಲ, ಶ್ವಾನದಳ ಮತ್ತು ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.