ADVERTISEMENT

ಕೋಲಾರ: ಹೂವಿನ ವ್ಯಾಪಾರಿಗಳ ಶೆಡ್‌ ತೆರವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 13:33 IST
Last Updated 19 ಫೆಬ್ರುವರಿ 2021, 13:33 IST
ಹೂವಿನ ವ್ಯಾಪಾರಿಗಳು ಕೋಲಾರದ ಹಳೇ ಬಸ್‌ ನಿಲ್ದಾಣ ಆವರಣದಲ್ಲಿನ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ ಮತ್ತು ಟೆಂಟ್‌ಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.
ಹೂವಿನ ವ್ಯಾಪಾರಿಗಳು ಕೋಲಾರದ ಹಳೇ ಬಸ್‌ ನಿಲ್ದಾಣ ಆವರಣದಲ್ಲಿನ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ ಮತ್ತು ಟೆಂಟ್‌ಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.   

ಕೋಲಾರ: ಹೂವಿನ ವ್ಯಾಪಾರಿಗಳು ನಗರದ ಹಳೇ ಬಸ್‌ ನಿಲ್ದಾಣ ಆವರಣದಲ್ಲಿನ ನಗರಸಭೆ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ ಮತ್ತು ಟೆಂಟ್‌ಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.

ತಾತ್ಕಾಲಿಕ ಶೆಡ್‌ ಹಾಗೂ ಟೆಂಟ್‌ಗಳಲ್ಲಿ ಹಲವು ವರ್ಷಗಳಿಂದ ಹೂವಿನ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ತೆರವು ಕಾರ್ಯಾಚರಣೆಗೆ ಆಕ್ಷೇಪಣೆ ವ್ಯಕ್ತಪಡಿಸಿ ನಗರಸಭೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಅಧಿಕಾರಿಗಳು ಪೊಲೀಸ್‌ ಭದ್ರತೆಯಿಂದ ಶೆಡ್‌ ಮತ್ತು ಟೆಂಟ್‌ಗಳನ್ನು ತೆರವು ಮಾಡಿದರು.

ನಂತರ ಮಾತನಾಡಿದ ನಗರಸಭೆ ಅಧ್ಯಕ್ಷೆ ಶ್ವೇತಾ, ‘ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ ಮತ್ತು ಟೆಂಟ್‌ ತೆರವು ಮಾಡಿದ್ದೇವೆ. ಹೂವಿನ ವ್ಯಾಪಾರಿಗಳು ಇದೇ ಜಾಗದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ವ್ಯಾಪಾರ ಮಾಡಲು ಅವಕಾಶ ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

‘ನಿಲ್ದಾಣದಲ್ಲಿ ಜನರ ವಿಶ್ರಾಂತಿಗಾಗಿ ನಿರ್ಮಿಸಿರುವ ತಂಗುದಾಣವನ್ನು ಹೂವಿನ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ಸಣ್ಣ ಪೆಟ್ಟಿಗೆ ಅಂಗಡಿಗಳನ್ನು ಇಟ್ಟಿದ್ದರು. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದ ಬಗ್ಗೆ ದೂರು ಬಂದಿತ್ತು. ಪ್ರಯಾಣಿಕರ ತಂಗುದಾಣ ಸುಸಜ್ಜಿತಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ಸದಸ್ಯರಾದ ನಾರಾಯಣಮ್ಮ, ಎಂ.ಸುರೇಶ್‌ಬಾಬು, ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.