ADVERTISEMENT

ಶ್ರೀನಿವಾಸಪುರ: ಹಳ್ಳಿಗೆ ಬಂದ ಹಾರುವ ಕಪ್ಪೆಗಳು

ಜನರಲ್ಲಿ ಕುತೂಹಲ ಮೂಡಿಸಿದ ಕಪ್ಪೆಗಳು

ಆರ್.ಚೌಡರೆಡ್ಡಿ
Published 28 ಆಗಸ್ಟ್ 2020, 6:59 IST
Last Updated 28 ಆಗಸ್ಟ್ 2020, 6:59 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಮನೆಯೊಂದರ ಗೋಡೆಯ ಮೇಲೆ ಕಂಡುಬಂದ ಹಾರುವ ಕಪ್ಪೆಗಳು
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಮನೆಯೊಂದರ ಗೋಡೆಯ ಮೇಲೆ ಕಂಡುಬಂದ ಹಾರುವ ಕಪ್ಪೆಗಳು   

ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಜಿಗಿಯುವ ಕಪ್ಪೆಗಳು ಕಂಡುಬಂದಿವೆ. ಮಳೆ ಸುರಿಯುವಾಗ ಮನೆ ಪ್ರವೇಶಿಸುವ ಈ ಕಪ್ಪೆಗಳು ಒಂದು ಗೊಡೆಯಿಂದ ಇನ್ನೊಂದು ಗೋಡೆಗೆ ಸಲೀಸಾಗಿ ಹಾರಬಲ್ಲವು. ಹಿಡಿಯಲು ಹೋದರೆ ದೂರದ ಗೋಡೆಗೂ ಜಿಗಿಯಬಲ್ಲವು.

ಕಪ್ಪೆಗಳು ಸಾಮಾನ್ಯವಾಗಿ ಕುಪ್ಪಳಿಸುತ್ತವೆ. ಹೊಸ ನೀರು ಬಂದಾಗ ವಟಗುಟ್ಟುತ್ತವೆ. ಆದರೆ ನಯವಾದ ದೇಹ ರಚನೆ ಹೊಂದಿರುವ ಹೊಸ ಕಪ್ಪೆಗಳು ವಟಗುಟ್ಟುವುದಿಲ್ಲ. ಮಹಾ ಮೌನಿಗಳು. ಹಿಡಿಯಲು ಹೋದರೆ ಹಾರಿ ಗೋಡೆಗೆ ಕಚ್ಚಿಕೊಳ್ಳುತ್ತವೆ.

ಕಪ್ಪೆಗಳಲ್ಲಿ ಹಲವು ಪ್ರಭೇದಗಳಿವೆ. ಉಬಯವಾಸಿಯಾದ ಕಪ್ಪೆಯನ್ನು ನೀರಿನಲ್ಲಿ, ಬಯಲಲ್ಲಿ, ಭೂಮಿಯಲ್ಲಿ ಹಾಗೂ ಬಂಡೆಗಳ ನಡುವೆ ಕಾಣಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಕಪ್ಪೆಗಳನ್ನು ಊದು ಕಪ್ಪೆ, ಮಣ್ಣು ಕಪ್ಪೆ ಹಾಗೂ ನೀರು ಕಪ್ಪೆ ಎಂದು ವಿಂಗಡಿಸಲಾಗಿದೆ. ಇವು ನೀರಿನಲ್ಲಿರುವಾಗ, ನೀರಿನಲ್ಲಿನ ಕ್ರಿಮಿ ಕೀಟ ತಿಂದು, ನೀರನ್ನು ಶುದ್ಧಗೊಳಿಸುತ್ತವೆ.

ADVERTISEMENT

ಜೈವಿಕ ನಿಯಂತ್ರಣದಲ್ಲಿ ಕಪ್ಪೆಗಳ ಪಾತ್ರ ಹಿರಿದು. ಅವು ಬೆಳೆಗಳನ್ನು ಬಾಧಿಸುವ ಕ್ರಿಮಿ ಕೀಟಗಳನ್ನು ತಿಂದು ರೈತರಿಗೆ ಉಪಕಾರ ಮಾಡುತ್ತವೆ. ಆದರೆ ಈ ಹಾರುವ ಕಪ್ಪೆಗಳು ಮನೆಗಳನ್ನು ಪ್ರವೇಶಿಸಿ ಗೋಡೆಗಳ ಮೇಲೆ ಕೂರುವ ಸೊಳ್ಳೆಯಂಥ ಕೀಟಗಳನ್ನು ಹಿಡಿದು ಭಕ್ಷಿಸುತ್ತವೆ. ನಯವಾದ ಗೋಡೆಗಳ ಮೇಲೆ ಹಿಡಿತ ಸಾಧಿಸಲು ಪೂರಕವಾಗಿ ಕಾಲುಗಳ ರಚನೆಯಿದೆ.

‘ನಾನು ಹೀಗೆ ಹಾರುವ ಕಪ್ಪೆಗಳನ್ನು ನೋಡಿಯೇ ಇಲ್ಲ. ಮನೆಯಲ್ಲಿ ಮರೆಯಲ್ಲಿ ಅಡಗಿ ಕುಳಿತುಕೊಳ್ಳುವ ಕಪ್ಪೆಗಳು, ಗೋಡೆಗಳ ಮೇಲೆ ಆಟವಾಡುತ್ತವೆ, ಎಂದು ಮಹಿಳೆ ವೆಂಕಟಮ್ಮ’ ಹೇಳಿದರು.

ಮನೆ ಪ್ರವೇಶಿಸುವ ಕಪ್ಪೆಗಳನ್ನು ಹುಷಾರಾಗಿ ಪೊರಕೆಯಲ್ಲಿ ಹಿಡಿದು ಹೊರಗೆ ಹಾಕಲಾಗುತ್ತಿದೆ. ಆದರೂ ಅವು ಮತ್ತೆ ಮತ್ತೆ ಮನೆಯಲ್ಲಿ ಪ್ರತ್ಯಕ್ಷವಾಗುತ್ತವೆ ಎಂಬುದು ಅವರ ಅಳಲು.

ಮನೆಯಲ್ಲಿ ಕಪ್ಪೆ ಇದ್ದರೆ ಹಾವುಗಳು ಬರುತ್ತವೆ ಎಂಬ ಭಯ ಕಾಡುತ್ತದೆ. ಆದರೂ ಗ್ರಾಮೀಣ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಕಪ್ಪೆಯನ್ನು ಕೊಲ್ಲುವುದಿಲ್ಲ. ಕಪ್ಪೆಗಳನ್ನು ಕೊಲ್ಲುವುದು ಪಾಪದ ಕೆಲಸ ಎನ್ನುವ ಭಾವನೆ ಅವರಲ್ಲಿದೆ. ಕಪ್ಪೆಯನ್ನು ಕಾಲಿನಲ್ಲಿ ಒದ್ದರೆ ಕಪ್ಪೆ ಕುರು ಏಳುತ್ತದೆ ಎಂಬ ನಂಬಿಕೆಯೂ ಇದೆ. ಇದೆಲ್ಲವೂ ರೈತ ಸ್ನೇಹಿಯಾದ ಕಪ್ಪೆಗಳನ್ನು ಉಳಿಸಲು, ಹಿರಿಯರು ಹುಟ್ಟುಹಾಕಿರುವ ನಂಬಿಕೆ ಎಂದು ಹೇಳುವವರಿದ್ದಾರೆ.

ಇಷ್ಟರ ನಡುವೆ ಮಳೆ ಸುರಿಯುವಾಗ ಹಾರುವ ಕಪ್ಪೆಗಳ ಆಟ ಶುರುವಾಗಿದೆ. ವಿವಿಧ ಬಣ್ಣ ಹಾಗೂ ಗಾತ್ರದ ಈ ಕಪ್ಪೆಗಳು ಜನರಲ್ಲಿ ಕುತೂಹಲ ಮೂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.