
ಕೋಲಾರ: ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸಿ ಅರಣ್ಯ ಭೂಮಿ ರಕ್ಷಿಸಿಕೊಳ್ಳಲು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದರೂ ಕೆಲ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಕೆಲ ಅಧಿಕಾರಿಗಳು ಹಾಗೂ ಒತ್ತುವರಿದಾರರು ಅರಣ್ಯಾಧಿಕಾರಿಗಳನ್ನು ಅವಮಾನಿಸುವ ರೀತಿ ಮಾತುಗಳನ್ನಾಡುತ್ತಿದ್ದಾರೆ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಸರೀನಾ ಸಿಕ್ಕಲಿಗಾರ್ ಬೇಸರ ವ್ಯಕ್ತಪಡಿಸಿದರು.
ನಗರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ನಮ್ಮ ಯಾವುದೇ ವೈಯಕ್ತಿಕ ವಿಚಾರ ಇಲ್ಲ. ನಾನಲ್ಲ; ಬೇರೆ ಯಾರೇ ಬಂದರೂ ತೆರವು ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಆದರೆ, ಅರಣ್ಯಾಧಿಕಾರಿಗಳಿಗೆ ಮಾನಸಿಕ ಹಿಂಸೆ ಕೊಡುವುದು, ಅವಮಾನ ಮಾಡಿದರೆ ಯಾರು ಅರಣ್ಯ ರಕ್ಷಣೆ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.
‘ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬರಿಗೂ ಅರಣ್ಯ ಬೇಕು. ಅದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಒತ್ತುವರಿ ತೆರವುಗೊಳಿಸಲು ಮುಂದಾದರೆ ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡಲಾಗುತ್ತಿದೆ. ರೈತರ ವಿರುದ್ಧ ಎತ್ತಿಕೊಟ್ಟುವ ಕೆಲಸ ನಡೆಯುತ್ತಿದೆ. ನಾನು ಯಾರ ವಿರುದ್ಧವೂ, ಯಾರ ಪರವೂ ಮಾತನಾಡಲ್ಲ. ಆದರೆ, ಅಡ್ಡಿ ಮಾಡುವ ಕೆಲಸ ಮಾಡಬೇಡಿ. ಬದಲಾಗಿ ಅರಣ್ಯ ರಕ್ಷಿಸಲು ನಮ್ಮ ಜೊತೆ ಕೈಜೋಡಿಸಿ’ ಎಂದು ಮನವಿ ಮಾಡಿದರು.
ಅರಣ್ಯ ಭೂ ಒತ್ತುವರಿ ಸಂಬಂಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿದ್ದು, ಈ ಬಗ್ಗೆ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಕೊಡಬಾರದು ಎಂದರು.
ಎಸ್‌ಐಟಿ ರಚಿಸಿ ಹೊರಡಿಸಿರುವ ಆದೇಶದಲ್ಲಿ ಒತ್ತುವರಿ ತೆರವು ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ, ಇಲಾಖೆಯ ಕಾಯ್ದೆ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ರೈತರು, ಅರಣ್ಯ, ಕಂದಾಯ ಇಲಾಖೆಗಳ ನಡುವಿನ ಗೊಂದಲ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಎಸ್‌ಐಟಿ ಅಧ್ಯಕ್ಷರಾಗಿದ್ದಾರೆ. ಭೂದಾಖಲೆಗಳಿಗೆ ಕಂದಾಯ ಇಲಾಖೆಯ ಮಾಲೀಕತ್ವ ಇರುವುದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚನೆಯಾಗಿದ್ದು, ಪ್ರತಿಭಟನೆಕಾರರಿಗೆ ತಪ್ಪು ಸಂದೇಶ ರವಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಧಿಕೃತವಾಗಿ ಯಾರೇ ಅರಣ್ಯ ಭೂಮಿ ಒತ್ತುವರಿಗೆ ಮುಂದಾದರೂ ಅದು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.
ಹಿಂದೆ ಅರಣ್ಯ ಭೂಮಿ ಮಂಜೂರು ಮಾಡುವಾಗ ಆಗಿರುವ ಲೋಪದ ತನಿಖೆ ನಡೆಸುವ ಕೆಲಸ ತಂಡ ಮಾಡಲಿದೆ. ಒತ್ತುವರಿ ತೆರವು ನಿಲ್ಲಿಸಿ ಎಂದು ನ್ಯಾಯಾಲಯ ಸೂಚನೆ ನೀಡಿಲ್ಲ. ಆದರೆ, ನಾವು ಕಾನೂನು ಪ್ರಕಾರ ಅರಣ್ಯ ಕಾಯ್ದೆಯಂತೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುತ್ತಿದ್ದು, ಇದು ಅರಣ್ಯ ಇಲಾಖೆ ಮಾತ್ರವಲ್ಲ, ಇತರೆ ಇಲಾಖೆಯವರು ಸಹಕಾರ ನೀಡಬೇಕು, ಜನರ ಜವಾಬ್ದಾರಿ ಸಹ ಇದೆ ಎಂದರು.
ಮುಳಬಾಗಿಲು ತಾಲ್ಲೂಕು ವ್ಯಾಪ್ತಿಯಲ್ಲಿ ದಾಖಲಾತಿ ಇಲ್ಲದೇ ಗೋಕುಂಟೆಯಲ್ಲಿ 400 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವುದನ್ನು ತೆರವು ಮಾಡಲಾಗಿದೆ. ಅದರಲ್ಲಿ ಮಂಜೂರಾಗಿರುವುದು 25 ಎಕರೆ ಮಾತ್ರ, ಆದರೆ ಸ್ವಾಧೀನದಲ್ಲಿ ಇರುವುದು ನೂರಾರು ಎಕರೆಯಲ್ಲಿ. ಈ ಸಂಬಂಧ ಕೆಲವರು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಅರಣ್ಯ ರಕ್ಷಣೆ ವಿಚಾರದಲ್ಲಿ ಜಿಲ್ಲಾಡಳಿತ ನಮಗೆ ಬೆಂಬಲ ನೀಡಬೇಕು ಪೊಲೀಸರು ನೆರವು ನೀಡಬೇಕು. ಒತ್ತುವರಿ ತೆರವು ವೇಳೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಸರೀನಾ ಸಿಕ್ಕಲಿಗಾರ್ ಡಿಸಿಎಫ್
ಶಾಸಕರ ಮಾತು ಬೇಸರ ತರಿಸಿದೆ
ದಿಶಾ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಅರಣ್ಯ ಇಲಾಖೆ ಅಕ್ರಮವಾಗಿ ಒತ್ತುವರಿ ಮಾಡಿದ್ದು ಗಿಡ ತೆರವಿಗೆ ಹಣ ಕೇಳುತ್ತಿದೆ ಎಂದಿರುವುದಕ್ಕೆ ಶಾಸಕರ ಹೇಳಿಕೆ ಬೇಸರದ ಸಂಗತಿ ಎಂದು ಡಿಸಿಎಫ್ ಹೇಳಿದರು. ಅರಣ್ಯ ಇಲಾಖೆಯಿಂದ ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ ಬಯಲುಸೀಮೆ ಪ್ರದೇಶ ಕೋಲಾರ. ಎಲ್ಲಾ ರಸ್ತೆಗಳನ್ನು ಹಸಿರೀಕರಣ ಮಾಡಲಾಗುತ್ತಿದೆ. ರಸ್ತೆ ವಿಸ್ತರಣೆ ಮಾಡುವಾಗ ಸರ್ಕಾರದ ನಿಯಮ ಪಾಲಿಸಲಾಗುತ್ತಿದೆ. ಮರಗಳ ಲೆಕ್ಕದಂತೆ ಹಣ ಕಟ್ಟಬೇಕು ಎಂದರು. ಗಿಡ ನೆಡುವುದು ಅಭಿವೃದ್ಧಿಯ ಒಂದು ಭಾಗ ರಸ್ತೆ ವಿಸ್ತರಣೆ ಅಥವಾ ಗಿಡ ತೆಗೆಯುವಾಗ ಮತ್ತಷ್ಟು ಗಿಡ ನೆಡಬೇಕು ಎಂಬ ಆದೇಶವಿದೆ ಎಂದು ಹೇಳಿದರು.
ಒತ್ತುವರಿ ತೆರವು ಮುಂದುವರಿದಿದೆ
ಯಾರೇ ಏನೇ ಅಡ್ಡಿಪಡಿಸಿದರೂ ಜಿಲ್ಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಡಿಸಿಎಫ್ ಸರೀನಾ ಸಿಕ್ಕಲಿಗಾರ್ ಸ್ಪಷ್ಟಿಪಡಿಸಿದರು. ಈಗಾಗಲೇ ಸಾವಿರಕ್ಕೂ ಅಧಿಕ ಎಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8 ಸಾವಿರ ಎಕರೆ ಒತ್ತುವರಿಯಾಗಿದೆ. ಈ ವರ್ಷ 500 ಎಕರೆ ಒತ್ತುವರಿ ತೆರವು ಗುರಿ ನಿಗದಿಪಡಿಸಲಾಗಿದೆ ಎಂದರು.
ಗುರಿ ಮಾಡಿ ಪ್ರಯೋಜನವಿಲ್ಲ
ಅರಣ್ಯಾಧಿಕಾರಿಗಳನ್ನು ಸಭೆಗೆ ಕರೆದು ಜನಪ್ರತಿನಿಧಿಗಳು ಅವಮಾನ ಮಾಡಬಹುದು ಇಲ್ಲಿಂದ ವರ್ಗಾವಣೆ ಮಾಡಬಹುದು. ದೌರ್ಜನ್ಯ ಪ್ರಕರಣ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಬಹುದು. ನನ್ನನ್ನು ಅಧಿಕಾರಿಗಳು ಸಿಬ್ಬಂದಿಯನ್ನು ಗುರಿ ಮಾಡಬಹುದು. ಆದರೆ ಅರಣ್ಯ ಇಲಾಖೆಯ ಜಮೀನಿನ ಸ್ಥಿತಿಗತಿ ಎಂದಿಗೂ ಬದಲಾಗದು. ಸುಪ್ರೀ ಕೋರ್ಟ್ ಪ್ರಕಾರ ಅರಣ್ಯ ಯಾವತ್ತಿಗೂ ಅರಣ್ಯವೇ ಎಂದು ಸರೀನಾ ಸಿಕ್ಕಲಿಗಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.