ADVERTISEMENT

ನನ್ನನ್ನು ಸೋಲಿಸಿದ್ದೇ ರಮೇಶ್‌ಕುಮಾರ್‌: ಕೆ.ಎಚ್‌ ಮುನಿಯಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 18:42 IST
Last Updated 30 ಮಾರ್ಚ್ 2022, 18:42 IST
ಕೆ.ಎಚ್. ಮುನಿಯಪ್ಪ
ಕೆ.ಎಚ್. ಮುನಿಯಪ್ಪ   

ಕೋಲಾರ: ವಿಧಾನಸಭಾ ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಜಿಲ್ಲಾ ಕಾಂಗ್ರೆಸ್‌ನ ಜಗಳ ಬೀದಿಗೆ ಬಂದಿದ್ದು, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಸ್ವಪಕ್ಷೀಯ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ವಿರುದ್ಧ ಬಹಿರಂಗವಾಗಿ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯುದ್ದಕ್ಕೂ ರಮೇಶ್‌ಕುಮಾರ್‌ ವಿರುದ್ಧ ಕೆಂಡ ಕಾರಿದ ಮುನಿಯಪ್ಪ, ‘ಹೇ, ರಮೇಶ್‌ಕುಮಾರ್, ನಿನ್ನ ನಾಟಕ ಎಲ್ಲಾ ಗೊತ್ತು. ಅತಿ ಬುದ್ಧಿವಂತಿಕೆ ತೋರಿಸಬೇಡ. ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ನೀನೇ ಕಾರಣ. ಬಹಳ ತಪ್ಪು ಮಾಡಿದ್ದೀಯಾ’ ಎಂದು ಏಕವಚನದಲ್ಲೇ ನಿಂದಿಸಿದರು.

‘ನನ್ನ ತಾಳ್ಮೆಗೂ ಒಂದು ಮಿತಿಯಿದೆ ಮಿಸ್ಟರ್‌ ರಮೇಶ್‌ಕುಮಾರ್. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ತಲೆ ಮೇಲೆ ಕೂರಿಸಿಕೊಂಡು ಗೆಲ್ಲಿಸಿದ್ದು ಅಯಿತು. ಈಗ ಮತ್ತೆ ಏಕೆ ಕಾಂಗ್ರೆಸ್‌ಗೆ ಬರುತ್ತಿದ್ದೀಯಾ? ಇನ್ನು ಮುಂದೆ ನಿನ್ನ ಆಟ ನಡೆಯಲ್ಲ. ಇಷ್ಟು ದಿನ ಹೈಕಮಾಂಡ್ ಸೂಚನೆ ಕಾರಣಕ್ಕೆ ಸುಮ್ಮನಿದ್ದೆ. ನಿನ್ನ ಕಥೆ ಜನರ ಮುಂದೆ ಬಿಚ್ಚಿಡುತ್ತೇನೆ. ಶ್ರೀನಿವಾಸಪುರ ಕ್ಷೇತ್ರದಿಂದಲೇ ಶುರು ಮಾಡುತ್ತೇನೆ, ಹುಷಾರ್!’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘3 ದಶಕದ ರಾಜಕಾರಣದಲ್ಲಿ 7 ಬಾರಿ ಸಂಸದನಾಗಿ ಕಾಂಗ್ರೆಸ್‌ ಪಕ್ಷದಿಂದಲೇ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್‌ ಸರಿಯಿಲ್ಲ ಎಂದು ದೇವೇಗೌಡರ ಬಳಿ ಹೋದ ರಮೇಶ್‌ಕುಮಾರ್‌ ಅಲ್ಲಿಂದ ಮತ್ತೆ ಕಾಂಗ್ರೆಸ್‌ಗೆ ಬಂದು ಕ್ಷೇತ್ರದಲ್ಲಿ ಪಕ್ಷವನ್ನು ಛಿದ್ರ ಮಾಡಿದೆ. ನಾನು ಬೆಳೆಸಿದ್ದ ಸಂಘಟನೆಯನ್ನೆಲ್ಲಾ ಹಾಳು ಮಾಡಿದ್ದೀಯಾ. ಕಾಂಗ್ರೆಸ್‌ ಪಕ್ಷದಲ್ಲಿ ದಿಕ್ಕು ತಪ್ಪಿಸಿ ಬಿಜೆಪಿಯನ್ನು ಗೆಲ್ಲಿಸಿದ್ದು ಇತಿಹಾಸದಲ್ಲೇ ಇಲ್ಲ. ಇದರ ಕೀರ್ತಿ ನಿನಗೆ ಸಲ್ಲುತ್ತದೆ’ ಎಂದು ಕುಟುಕಿದರು.

ಬಿಜೆಪಿಯಿಂದ ಸ್ಪರ್ಧಿಸು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಿ ಇಲ್ಲ ಎಂದು ಬಿಜೆಪಿಯನ್ನು ಗೆಲ್ಲಿಸಿದೆಯಲ್ಲಾ? ಈಗ ಬಿಜೆಪಿಗೆ ಹೋಗಿ ಚುನಾವಣೆಗೆ ನಿಂತುಕೋ, ನಾನು ನೋಡೇ ಬಿಡುತ್ತೇನೆ. ಏಕೆ ಇನ್ನೂ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದೀಯಾ? ನಿನಗೆ ಮಾನ ಮಾರ್ಯದೆ ಏನಾದರೂ ಇದೆಯಾ? ಈಗ ಮತ್ತೆ ಕಾಂಗ್ರೆಸ್‌ ಬಗ್ಗೆ ಮಾತನಾಡುತ್ತೀಯಾ? ನಿನಗೆ ಸ್ವಲ್ಪವೂ ನಾಚಿಕೆಯಾಗಲ್ಲವಾ?‘ ಎಂದು ರಮೇಶ್‌ಕುಮಾರ್‌ಗೆ ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಆಟ ಆಡುತ್ತಿದ್ದೀಯಾ? ಶ್ರೀನಿವಾಸಪುರಕ್ಕೆ ಬಂದು ಬಹಿರಂಗ ಸಭೆಯಲ್ಲೇ ನಿನ್ನ ಬಂಡವಾಳ ಬಯಲು ಮಾಡುತ್ತೇನೆ. ರಾಜಕೀಯವಾಗಿ ಮುಳುಗುತ್ತಿರುವ ನೀನು ಜತೆಯಲ್ಲಿ ಇದ್ದವರನ್ನು ಮುಳುಗಿಸುತ್ತೀಯಾ? ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಬೇಕೆಂದು ತೀರ್ಮಾನಿಸಿದ್ದಿಯಾ?. ಮುಂದಿನ ಒಂದು ವರ್ಷದಲ್ಲಿ‌ ನಾನು ಏನೆಂದು ನಿನಗೆ ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.