ADVERTISEMENT

ಕಾಂಗ್ರೆಸ್‌ನಲ್ಲಿ ಹಿತಶತ್ರುಗಳ ಕಾಟ ಹೆಚ್ಚು: ಮಾಜಿ ಸಂಸದ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 13:10 IST
Last Updated 29 ಡಿಸೆಂಬರ್ 2020, 13:10 IST
ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕವು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕವು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಜಿಲ್ಲೆಯಲ್ಲಿ ನಾನು ಸಾಕಷ್ಟು ಮಂದಿಯನ್ನು ಕಾಂಗ್ರೆಸ್‌ಗೆ ಕರೆತಂದು ಪಕ್ಷ ಕಟ್ಟಿ ಬೆಳೆಸಿದೆ. ಆದರೆ, ಅವರೇ ನನಗೆ ದ್ರೋಹ ಬಗೆದರು’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪಕ್ಷದೊಳಗಿನ ವಿರೋಧಿಗಳ ವಿರುದ್ಧ ಗುಡುಗಿದರು.

ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಪಕ್ಷದೊಳಗೆ ಹಿತಶತ್ರುಗಳ ಕಾಟ ಹೆಚ್ಚಿದೆ. ಕಾರ್ಯಕರ್ತರು ಇಂತಹವರ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮತ ಹಾಕಬೇಡಿ ಎಂದು ನಾನು ಹೇಳಿಲ್ಲ. ಆದರೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ರಮೇಶ್‌ಕುಮಾರ್, ನಸೀರ್‌ ಅಹಮ್ಮದ್‌, ನಾರಾಯಣಸ್ವಾಮಿ ಅವರಿಗೆ ತಾಕತ್ತಿದ್ದರೆ ಬಹಿರಂಗವಾಗಿ ಹೇಳಲಿ. ಅವರು ತಮ್ಮ ಆರೋಪ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ರಾಜಕೀಯ ಬದಲಾವಣೆಯಿಂದ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದ ನಾನು ಸೋಲಬೇಕಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದ ವಿಧಾನಸಭಾ ಕ್ಷೇತ್ರಗಳಲ್ಲೂ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಕೆಪಿಸಿಸಿಗೆ ಮಾತು ಕೊಟ್ಟಿದ್ದೇನೆ. ಜಿ.ಪಂ, ತಾ.ಪಂ ಚುನಾವಣೆಯಿಂದಲೇ ಕಾರ್ಯಕರ್ತರು ಸನ್ನದ್ಧರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಮುಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅಥವಾ ಪರಮೇಶ್ವರ್‌ ಸೇರಿದಂತೆ ಯಾರೇ ಮುಖ್ಯಮಂತ್ರಿಯಾಗಲಿ. ಆದರೆ, ಈಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡು ಪಕ್ಷಕ್ಕೆ ತೊಂದರೆ ಕೊಡಬಾರದು. ಅಧಿಕಾರಕ್ಕೆ ಬರುವ ಪಕ್ಷದ ಮೂಲ ಉದ್ದೇಶ ಈಡೇರಬೇಕು’ ಎಂದು ತಿಳಿಸಿದರು.

ಕೇಂದ್ರದ ಮೊಂಡುತನ: ‘ಹರಿಯಾಣ, ಪಂಜಾಬ್ ರಾಜ್ಯಗಳು ದೇಶದ ಕಣಜ. ಅಲ್ಲಿನ ರೈತರು ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ಖಂಡಿಸಿ ನಿರಂತರ ಧರಣಿ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿದ್ದವರನ್ನು ವಾಪಸ್ ಕರೆಸಿಕೊಂಡು ಹೋರಾಟ ಮಾಡುತ್ತಿದ್ದಾರೆ. ಆದರೆ, ಕೇಂದ್ರವು ಮೊಂಡುತನ ಪ್ರದರ್ಶಿಸುತ್ತಿದೆ. ಮೋದಿ ಸರ್ಕಾರ ಕಣ್ಣು ತೆರೆದು ಸಹ ನೋಡಿಲ್ಲ’ ಎಂದು ಕಿಡಿಕಾರಿದರು.

‘ಕೇಂದ್ರದ ಧ್ವಂದ್ವ ನೀತಿಯಿಂದ ದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಯುಪಿಎ ಸರ್ಕಾರವಿದ್ದಾಗ ಜಿಲ್ಲೆಯ ನರಸಾಪುರ, ವೇಮಗಲ್‌ನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಸಾವಿರಾರು ಮಂದಿ ಬದುಕು ಕಟ್ಡಿಕೊಂಡಿದ್ದಾರೆ. ಇದರಲ್ಲಿ ಬಿಜೆಪಿ ಸಾಧನೆಯೇನು?’ ಎಂದು ಪ್ರಶ್ನಿಸಿದರು.

ಬ್ರೇಕ್ ಬಿದ್ದಿದೆ: ‘ಮಾಜಿ ಶಾಸಕ ಆರ್.ವರ್ತೂರು ಪ್ರಕಾಶ್ ಅವರು ಇತ್ತೀಚೆಗೆ ಸಭೆ ನಡೆಸಿ ಕೋಲಾರದಲ್ಲಿ ಕಾಂಗ್ರೆಸ್‌ ಇಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‌ಗೂ ವರ್ತೂರು ಪ್ರಕಾಶ್‌ಗೂ ಸಂಬಂಧವಿಲ್ಲ ಎಂದು ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಗ್ರಾ.ಪಂ ಚುನಾವಣೆಯ ಚಿತ್ರಣವೇ ಬದಲಾಗಿದ್ದು, ವರ್ತೂರು ಪ್ರಕಾಶ್‌ ಆಟಕ್ಕೆ ಬ್ರೇಕ್ ಬಿದ್ದಿದೆ’ ಎಂದು ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌ ಕುಟುಕಿದರು.

ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಹಾಪ್‌ಕಾಮ್ಸ್ ಉಪಾಧ್ಯಕ್ಷ ಗೋಪಾಲಕೃಷ್ಣ, ಕೆಪಿಸಿಸಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಮಂಜುನಾಥ್, ಕಾಂಗ್ರೆಸ್‌ ಕಿಸಾನ್‌ ಖೇತ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್‌ಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‌ಶಂಕರ್, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.