
ಕೋಲಾರ: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಯೂಟ್ಯೂಬ್ ಚಾನಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿರುವ ವಿಚಾರವನ್ನು ರಮೇಶ್ ಕುಮಾರ್ ಅಭಿಮಾನಿಗಳು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಕ್ಷೇತ್ರದ ಜನರಿಗೆ ನಾನು ಯಾವುದೇ ತಪ್ಪು ಎಸಗಿರಲಿಲ್ಲ. ಪತ್ನಿ, ಮಕ್ಕಳು, ಕುಟುಂಬಕ್ಕಿಂತ ಹೆಚ್ಚಾಗಿ ನೋಡಿಕೊಂಡೆ. ನನ್ನ ಮನಸ್ಥಿತಿ, ಮಾಡಿದ ಕೆಲಸವನ್ನು ನೋಡದೆ ಸೋಲಿಸಿಬಿಟ್ಟರು, ನನ್ನನ್ನು ಏಕಾಂಗಿ ಆಗಿಸಿಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಸಿಮೆಂಟು, ಸ್ಟೀಲ್‌ನಿಂದ ಮಾಡಿದ ಗೊಂಬೆ ಅಲ್ಲ. ನಾನು ಕೂಡ ಉಪ್ಪು ಕಾರ ತಿಂದು ಬೆಳೆದವನು. ಹೀಗಾಗಿ, ಬೇಸರ, ನೋವು, ದುಃಖ ಆಗಿ ಸ್ವಲ್ಪ ದಿನ ಅಜ್ಞಾತವಾಸದಲ್ಲಿದ್ದೆ. ಈ ಸಮಾಜಕ್ಕೆ ಏಕೆ ಮುಖ ತೋರಿಸಬೇಕೆಂಬ ಭಾವನೆ ನನ್ನಲ್ಲಿ ಬಂದಿತ್ತು. ಇರುವ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೆ ಎಂದಿದ್ದಾರೆ.
2023ರ ಫೆಬ್ರುವರಿಯಲ್ಲಿ ಪತ್ನಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀರಿಕೊಂಡಳು. 47 ವರ್ಷ ನನ್ನ ಜೊತೆ ಇದ್ದಳು. ಆಕೆ ನನ್ನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿ ಎಂದು ಒಂದು ದಿನವೂ ಕೇಳಲಿಲ್ಲ, ಸೀರೆ ಕೊಡಿಸಿ ಎಂದು ಕೇಳಲಿಲ್ಲ. ಸರ್ಕಾರಿ ಕಾರಿನಲ್ಲಿ ಆಕೆ ಕೂರಲಿಲ್ಲ. ಯಾವುದಕ್ಕೂ ಆಸೆ ಪಟ್ಟವಳಲ್ಲ. ಕಷ್ಟದಲ್ಲಿ ಭಾಗಿಯಾದಳು. ನಾನು ಗೌರವದಿಂದ, ಧೈರ್ಯದಿಂದ ಹಾಗೂ ಪ್ರಾಮಾಣಿಕವಾಗಿ ಬದುಕಲು ಆಕೆ ಕಾರಣಳಾದಳು. ಸರ್ಕಾರಿ ಬಂಗಲೆಯಲ್ಲಿ ಇರಲೂ ಆಕೆ ಒಪ್ಪಿರಲಿಲ್ಲ. ಅಂಥವರು ದೂರವಾದಾಗ ಮನಸ್ಸಿಗೆ ಕಷ್ಟವಾಗುತ್ತದೆ ಎಂದು ಭಾವುಕರಾಗಿದ್ದಾರೆ.
ನನಗೆ ಜಾತಿ ಇಲ್ಲ, ಹಣ ಇಲ್ಲ, ಅಧಿಕಾರದ ಆಸೆ ಇಲ್ಲ. ಯಾವುದಕ್ಕೂ ಆಸೆಪಡದ ಇವನು ಪಾಳು ಬಿದ್ದ ಭೂಮಿಗೆ ಹೋಗುತ್ತಾನಾ? ಅಂಥ ತಪ್ಪು ಮಾಡುತ್ತಾನಾ ಎಂಬ ಕರುಣೆ ಇಲ್ಲದೆಯೇ ಕೆಲವರು ಆರೋಪ ಮಾಡಿದರು, ಏನೆಲ್ಲಾ ಮಾತನಾಡಿದರು? ತೋಜೋವಧೆ ನಡೆಯಿತು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿರುವುದು, ಅಧಿಕಾರದ ಅಪೇಕ್ಷೆ ಇಲ್ಲದೆಯೂ ಅಧಿಕಾರದಲ್ಲಿರುವುದು ತುಂಬಾ ಕಷ್ಟ ಎಂದಿದ್ದಾರೆ.
ನನಗೆ ಹೊಸ ಕನಸು, ಬಯಕೆ, ಆಸೆ ಇಲ್ಲ. 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಹಲವು ಏಳುಬೀಳು ನೋಡಿದ್ದೇನೆ. 1970ರಲ್ಲಿ ಬೆಂಗಳೂರಿನಲ್ಲಿ ಕಾರ್ಪೊರೇಷನ್ ಚುನಾವಣೆಗೆ ಮಲ್ಲೇಶ್ವರಂನ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದೆ. ಆಗ ನಾನು ದ್ವಿತೀಯ ಬಿ.ಎಸ್ಸಿ ಓದುತ್ತಿದ್ದೆ. 1978ರಲ್ಲಿ ವಿಧಾನಸಭೆ ಪ್ರವೇಶಿಸಿದೆ, ಆಗ ನನಗೆ 28 ವರ್ಷ. ಮೊದಲ ಚುನಾವಣೆಗೆ ₹ 15 ಸಾವಿರ ಖರ್ಚು ಮಾಡಿದ್ದೆ. 1983ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದೆ, ಆಗ ಅವರಿವರು ನೀಡಿದ ₹ 45 ಸಾವಿರ ಖರ್ಚಾಗಿತ್ತು ಎಂದು
ನೆನಪಿಸಿಕೊಂಡಿದ್ದಾರೆ.
ನನ್ನನ್ನು ಅಮಾನವೀಯವಾಗಿ ಸೋಲಿಸಿಬಿಟ್ಟರು. ಕರುಣೆ ಪ್ರೀತಿ ಗೌರವ ತೋರಲಿಲ್ಲ. ಜನರಿಗೆ ಏಕೆ ಅಂಥ ಮನಸ್ಸು ಬಂತೋ ಏನೋ? ನನ್ನ ಸೇವೆಯೇ ಜನರಿಗೆ ಅರ್ಥವಾಗಲಿಲ್ಲವೇನೋ?–ಕೆ.ಆರ್.ರಮೇಶ್ ಕುಮಾರ್, ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.