ಕೆಜಿಎಫ್: ರಾಬರ್ಟಸನ್‌ಪೇಟೆಯ ಮೈನಿಂಗ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಫ್ರಾಂಕ್ ಅಂಡ್ ಕೋ ಕೆರೆ ಇಂದು ಅವಸಾನದ ಅಂಚಿಗೆ ತಲುಪಿದೆ.
ದಿನೇ ದಿನೇ ಕೆರೆಯು ಒಂದು ಬದಿಯಲ್ಲಿ ಒತ್ತುವರಿಯಾಗುತ್ತಿದ್ದರೆ, ಮತ್ತೊಂದೆಡೆ ಕೊಳಚೆ ನೀರು ಕೆರೆಯಲ್ಲಿ ಸಂಗ್ರಹವಾಗಿ ಕೆರೆ ಅಕ್ಕಪಕ್ಕದ ನಿವಾಸಿಗಳು ಸದಾ ದುರ್ವಾಸನೆಯಲ್ಲಿ ಬದುಕಬೇಕಾಗಿದೆ.
ಫ್ರಾಂಕ್ ಅಂಡ್ ಕೋ ಕೆರೆ 11.17 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಕೆರೆಯು ಗೋಣಮಾಕನಹಳ್ಳಿ ಗ್ರಾಮದ ಮೂಲಕ ನೀರು ಹರಿದು ಶಿವಸಾಗರ ಕೆರೆಯನ್ನು ಸೇರುತ್ತದೆ. ಅಲ್ಲಿಂದ ತಿಪ್ಪನೆಟ್ಟಿ ಕೆರೆಗೆ ಹೋಗುತ್ತದೆ. ಮೈನಿಂಗ್ ಪ್ರದೇಶದ ಎತ್ತರದ ಪ್ರದೇಶದಿಂದ ನೀರು ಈ ಕೆರೆಗೆ ಹರಿದು ಬರುತ್ತಿದ್ದು, ಸದಾ ನೀರು ಇರುತ್ತದೆ.
ಕೆರೆಯಲ್ಲಿ ನೀರು ಮತ್ತು ತ್ಯಾಜ್ಯ ಸೇರಿರುವುದರಿಂದ ಜಲಸಸ್ಯಗಳು ಸಮೃದ್ಧವಾಗಿ ಬೆಳೆದಿದೆ. ಈಡೀ ಕೆರೆ ಹಸಿರು ಬಣ್ಣದಿಂದ ಕಾಣುತ್ತದೆ. ಕೆರೆಯನ್ನು 1984 ರಲ್ಲಿ ರಾಬರ್ಟಸನ್‌ಪೇಟೆ ನಗರಸಭೆಯಿಂದ ಪುನರುಜ್ಜೀವನ ಮಾಡಲಾಗಿತ್ತು. ಕೆರೆಯ ಮೇಲಿನ ಏರಿಯನ್ನು ಸ್ವಚ್ಛಗೊಳಿಸಿ, ಸೇತುವೆ ನಿರ್ಮಾಣ ಮಾಡಲಾಗಿತ್ತು. ಅಂದಿನಿಂದ ಇಲ್ಲಿಯವರೆವಿಗೂ ಕೆರೆಯ ಬಗ್ಗೆ ನಗರಸಭೆಯಿಂದ ಒಂದು ಸ್ವಚ್ಛತಾ ಕೆಲಸವಾಗಲಿ, ಅಭಿವೃದ್ಧಿ ಕೆಲಸವಾಗಲಿ ನಡೆದಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಮಾತಾಗಿದೆ.
ಕೆರೆಯ ಕೋಡಿ ಕೂಡ ಸಂಪೂರ್ಣ ಮುಚ್ಚಿಹೋಗಿದ್ದು, ಖಾಸಗಿ ವ್ಯಕ್ತಿಗಳು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವರು ರಾಜಕಾಲುವೆಗೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಖಾಸಗಿ ಶಾಲೆಯೊಂದು ಆಟದ ಮೈದಾನಕ್ಕೆ ಕೂಡ ರಾಜಕಾಲುವೆಯನ್ನು ಬಳಸಿಕೊಳ್ಳುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
ಕೆರೆಯ ಅಂಚಿನಲ್ಲಿ ನಗರಸಭೆ ಸಾರ್ವಜನಿಕ ಶೌಚಾಲಯ ನಿರ್ಮಿಸಿ, ಅದರ ತ್ಯಾಜ್ಯವನ್ನು ಕೆರೆ ನೀರಿಗೆ ಬಿಡಲಾಗುತ್ತದೆ. ಅಕ್ಕಪಕ್ಕದ ಕೆಲ ನಿವಾಸಿಗಳು ಮನೆಯ ಕಸ, ಮತ್ತಿತರ ತ್ಯಾಜ್ಯವನ್ನು ತಂದು ಕೆರೆಯಲ್ಲಿ ಸುರಿಯುತ್ತಿದ್ದು, ಇದರಿಂದ ಕೆರೆ ಮತ್ತಷ್ಟು ಮಲಿನಗೊಳ್ಳುತ್ತಿದೆ.
ಕೆರೆಗಳ ಅಭಿವೃದ್ಧಿಗೆ ಮೊದಲ ಹಂತದಲ್ಲಿ ಸ್ವರ್ಣನಗರ ಕೆರೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿ ಮಾಡಲಾಗುವುದು.
ಮಂಜುನಾಥ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೆರೆಯನ್ನು ಸ್ವಚ್ಛಗೊಳಿಸಿ ದುರ್ವಾಸನೆ ನಿಲ್ಲಿಸುವ ಕೆಲಸವನ್ನು ನಗರಸಭೆ ಮಾಡಬೇಕು.
ಶಂಕರ್ ಗೋಣಮಾಕನಹಳ್ಳಿ ನಿವಾಸಿ.
ನಗರಸಭೆ ವ್ಯಾಪ್ತಿಗೆ ಬರುವ ಕೆರೆಗಳು
ರಾಬರ್ಟಸನ್‌ಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಸ್ವರ್ಣನಗರ ಕೆರೆ ಊರಿಗಾಂ ಕೆರೆ ಗೌಡನ ಕೆರೆ ಫ್ರಾಂಕ್ ಅಂಡ್ ಕೋ ಕೆರೆ ಬೈರೇಗೌಡನ ಕೆರೆ ತಣಿಕೆರೆ ಗಂಗದೊಡ್ಡಿ ಕೆರೆಗಳು ಬರುತ್ತವೆ. ಆದರೆ ನಗರಸಭೆಯವರು ಕೆರೆ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಹಲವು ಕೆರೆಗಳು ನಿರಂತರವಾಗಿ ಒತ್ತುವರಿಯಾಗುತ್ತಲೇ ಇದೆ. ಒತ್ತುವರಿ ತೆರವು ಮಾಡಿದ ಒಂದು ನಿದರ್ಶನ ಕೂಡ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.