ADVERTISEMENT

ಭಾನುವಾರ ಸಂಪೂರ್ಣ ಲಾಕ್‌ಡೌನ್‌: ಡಿ.ಸಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:57 IST
Last Updated 3 ಜುಲೈ 2020, 16:57 IST

ಕೋಲಾರ: ಕೇಂದ್ರ ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಜುಲೈ 5ರಿಂದ ಆಗಸ್ಟ್ 2ರವರೆಗೆ ಎಲ್ಲಾ ಭಾನುವಾರದಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲು ಸರ್ಕಾರವು ಜುಲೈ 1ರಿಂದ 31ರವರೆಗೆ ಲಾಕ್‌ಡೌನ್‌ ಆದೇಶ ಮುಂದುವರಿಸಿದೆ. ಈ ಆದೇಶದಂತೆ ಪ್ರತಿನಿತ್ಯ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಭಾನುವಾರ ದಿನ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಲಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಹಿವಾಟಿನ ಸ್ಥಳಗಳಲ್ಲಿ ಕಡ್ಡಾಯವಾಗಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಗಳ ಬಳಿ ಗ್ರಾಹಕರು ಅಂತರ ಕಾಯ್ದುಕೊಳ್ಳುವುದು ನೋಡಿಕೊಳ್ಳುವುದು ಅಂಗಡಿ ಮಾಲೀಕರ ಜವಾಬ್ದಾರಿ. ಅಂತರ ಕಾಯ್ದುಕೊಳ್ಳದಿದ್ದರೆ ಅಂಗಡಿ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ತುರ್ತು ವೈದ್ಯಕೀಯ ಸೇವೆ, ಸರಕು ಸಾಗಣೆ ವಾಹನಗಳು, ಅಗತ್ಯ ಸೇವೆ ಪೂರೈಕೆಗೆ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ಅಧಿಕಾರಿಗಳ ವಾಹನಗಳು, ಹಾಪ್‌ಕಾಮ್ಸ್, ಪಡಿತರ ಆಹಾರ ಪದಾರ್ಥ ಸರಬರಾಜು ಮತ್ತು ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ ಆದೇಶ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಷೇಧಾಜ್ಞೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60ರ ಜತೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 188ರ ಪ್ರಕಾರ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಸ್ಥಳಗಳು, ಸರ್ಕಾರಿ ಕಚೇರಿಗಳು ಮತ್ತು ಹೊರಗೆ ಪ್ರಯಾಣಿಸುವ ವೇಳೆ ಎಲ್ಲರೂ ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ₹ 200 ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.