ADVERTISEMENT

ಸ್ವಯಂ ಉದ್ಯೋಗದಿಂದ ಭವಿಷ್ಯ ಉಜ್ವಲ

ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 4:44 IST
Last Updated 21 ನವೆಂಬರ್ 2019, 4:44 IST
ಜಿಲ್ಲಾ ನಿರ್ಮಿತಿ ಕೇಂದ್ರವು ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಕಟ್ಟಡ ಕಾರ್ಮಿಕರಿಗೆ ಉಪಕರಣ ವಿತರಿಸಿದರು.
ಜಿಲ್ಲಾ ನಿರ್ಮಿತಿ ಕೇಂದ್ರವು ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಕಟ್ಟಡ ಕಾರ್ಮಿಕರಿಗೆ ಉಪಕರಣ ವಿತರಿಸಿದರು.   

ಕೋಲಾರ: ‘ಕಾರ್ಮಿಕರು ಕೌಶಲ ತರಬೇತಿ ಪಡೆದು ಸ್ವಯಂ ಉದ್ಯೋಗ ಆರಂಭಿಸಿದರೆ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಕಿವಿಮಾತು ಹೇಳಿದರು.

ಜಿಲ್ಲಾ ನಿರ್ಮಿತಿ ಕೇಂದ್ರವು ಇಲ್ಲಿ ಸೋಮವಾರ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಉಪಕರಣ ಪೆಟ್ಟಿಗೆ ಹಾಗೂ ಹಣಕಾಸು ನೆರವಿನ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿ, ‘ಕಾರ್ಮಿಕರು ಕೌಶಲ ತರಬೇತಿ ಸದುಪಯೋಗಪಡಿಸಿಕೊಳ್ಳಿ’ ಎಂದರು.

‘ಕಾರ್ಮಿಕರು ಸ್ವಯಂ ಉದ್ಯೋಗ ನಡೆಸಲು ವಿವಿಧ ಯೋಜನೆಯಡಿ 30 ದಿನ ಕೌಶಲ ತರಬೇತಿ ನೀಡಲಾಗುತ್ತಿದೆ. ಈ ಬಗ್ಗೆ ಇತರರಿಗೂ ಮಾಹಿತಿ ನೀಡಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕಾರ್ಮಿಕ ಮಂಡಳಿ ರಚಿಸಿದ್ದು, ಮಂಡಳಿಯಲ್ಲಿ ಹೆಸರು ನೊಂದಾಯಿಸಿ ಸೌಕರ್ಯ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕಾರ್ಮಿಕರು ವಿವಿಧ ಕೆಲಸಕ್ಕೆ ಅಲೆದಾಡಿ ಕೊನೆಗೆ ಯಾವುದೇ ಕೆಲಸ ಸಿಗದೆ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಾಗುತ್ತಾರೆ. ಅವರಿಗೆ ತರಬೇತಿ ನೀಡಿದರೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಎನ್.ನಾರಾಯಣಗೌಡ ಅಭಿಪ್ರಾಯಪಟ್ಟರು.

‘30 ದಿನಗಳ ಕಾಲ ಕೇವಲ ತರಬೇತಿಯಷ್ಟೇ ನೀಡುವುದಿಲ್ಲ. ಆರೋಗ್ಯ ತಪಾಸಣೆ, ಯೋಗ, ಹಣಕಾಸು ವ್ಯವಹಾರದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ತರಬೇತಿಯ ಅಂತ್ಯದಲ್ಲಿ ಸಲಕರಣೆ ಪೆಟ್ಟಿಗೆ, ಪ್ರಮಾಣಪತ್ರ ಹಾಗೂ ₹ 7,200 ಹಣಕಾಸು ನೆರವು ನೀಡಲಾಗುತ್ತಿದೆ. ಈ ಹಣವನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ’ ಎಂದು ವಿವರಿಸಿದರು.

ಬೇಡಿಕೆ ಹೆಚ್ಚಿದೆ: ‘ಇತ್ತೀಚಿನ ವರ್ಷಗಳಲ್ಲಿ ಗಾರೆ ಮತ್ತು ಪೇಂಟಿಂಗ್‌ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ಗುತ್ತಿಗೆದಾರರಿಗೆ ಸೂಚಿಸಿ ನಗರ ಪ್ರದೇಶದಲ್ಲಿ ದೊಡ್ಡ ಕಟ್ಟಡ ಕಾಮಗಾರಿ ಹಾಗೂ ಗ್ರಾಮೀಣ ಭಾಗದಲ್ಲಿ ನರೇಗಾ ಕಾಮಗಾರಿಗಳಿಗೆ ಕಾರ್ಮಿಕರನ್ನು ಬಳಸಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಗುರುತಿನ ಚೀಟಿ: ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇಲಾಖೆಯಲ್ಲಿ ಹೆಸರು ನೊಂದಾಯಿಸಿದರೆ ಗುರುತಿನ ಚೀಟಿ ವಿತರಿಸುತ್ತೇವೆ. ಇದರಿಂದ ಸರ್ಕಾರಿ ಸವಲತ್ತು ಪಡೆದುಕೊಳ್ಳಬಹುದು ಸಾಧ್ಯ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ (ಪ್ರಭಾರ) ವಿಜಯ್‌ಕುಮಾರ್ ಮಾಹಿತಿ ನೀಡಿದರು.

‘30 ದಿನಗಳ ಕಾಲ ನುರಿತ ತರಬೇತಿ ನೀಡಲಾಗಿದ್ದು, ಮುಂದೆ ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಕೆಲಸ ನೀಡುವಂತೆ ಸಂಬಂಧಪಟ್ಟವರಿಗೆ ಪ್ರಸ್ತಾವ ಸಲ್ಲಿಸುತ್ತೇವೆ. ಕಾರ್ಮಿಕರು ತರಬೇತಿ ಅವಧಿಯಲ್ಲಿ ಉತ್ತಮವಾಗಿ ಕೆಲಸ ಕಲಿಯಬೇಕು’ ಎಂದು ತಿಳಿಸಿದರು.

16 ಮಂದಿ ಗಾರೆ ಕೆಲಸಗಾರರು, 32 ಪೇಂಟಿಂಗ್‌ ಕಾರ್ಮಿಕರಿಗೆ ಸಲಕರಣೆ, ತರಬೇತಿ ಪ್ರಮಾಣಪತ್ರ ಹಾಗೂ ಚೆಕ್ ವಿತರಿಸಲಾಯಿತು. ಜಿಲ್ಲಾ ನಿರ್ಮಿತಿ ಕೇಂದ್ರದ ತರಬೇತಿ ಸಂಯೋಜಕ ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.