ADVERTISEMENT

ಕೆಜಿಎಫ್‌ | ಗಣಪತಿ ವಿಸರ್ಜನೆ: ಪೊಲೀಸರ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:10 IST
Last Updated 8 ಸೆಪ್ಟೆಂಬರ್ 2024, 13:10 IST
ಕೆಜಿಎಫ್‌ ಪಾರಾಂಡಹಳ್ಳಿ ಕೆರೆ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಶನಿವಾರ ಗಣೇಶ ಮೂರ್ತಿ ವಿಸರ್ಜನೆಗೆ ಬಂದಿದ್ದ ನಿವಾಸಿಯೊಬ್ಬರ ಜೊತೆ ಸಂಭಾಷಣೆ ನಡೆಸಿದರು
ಕೆಜಿಎಫ್‌ ಪಾರಾಂಡಹಳ್ಳಿ ಕೆರೆ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಶನಿವಾರ ಗಣೇಶ ಮೂರ್ತಿ ವಿಸರ್ಜನೆಗೆ ಬಂದಿದ್ದ ನಿವಾಸಿಯೊಬ್ಬರ ಜೊತೆ ಸಂಭಾಷಣೆ ನಡೆಸಿದರು   

ಕೆಜಿಎಫ್‌: ಗಣಪತಿ ಮೂರ್ತಿ ವಿಸರ್ಜನೆ ವೇಳೆ ತಾಲ್ಲೂಕು ಆಡಳಿತ ನೀಡಿದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.

ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂದಾಲೋಚನೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಗಣೇಶ ಮೂರ್ತಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಡ್ರೋನ್‌ ಕ್ಯಾಮೆರಾ ಕೂಡ ನಿಗಾ ವಹಿಸಲಿದೆ. ಗಣೇಶ ಮೂರ್ತಿಯ ವಿಸರ್ಜನೆಯಾಗಿ ಅದು ಪುನಃ ಸ್ವಸ್ಥಾನ ಸೇರುವ ತನಕ ಪೊಲೀಸರು ಬೆಂಗಾವಲು ಒದಗಿಸುತ್ತಾರೆ. ವಿಸರ್ಜನೆಗೆ ತೆರಳುವ ಮಾರ್ಗದಲ್ಲಿ ಬರುವಾಗ ಗಣಪತಿ ಮೂರ್ತಿಗೆ ವಿದ್ಯುತ್ ತಂತಿಗಳು ತಗಲುತ್ತದೆಯೇ ಎಂಬುದರ ಬಗ್ಗೆ ಸಂಘಟಕರು ಎಚ್ಚರ ವಹಿಸಬೇಕು. ಪೊಲೀಸರು ಕೂಡ ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.

ಗಣಪತಿ ಪ್ರತಿಷ್ಠಾಪಿಸುವ ಪೆಂಡಾಲ್‌ನಲ್ಲಿ ರಾತ್ರಿ ಹೊತ್ತು ಸ್ವಯಂಸೇವಕರು ಕಡ್ಡಾಯವಾಗಿ ಇರಬೇಕು. ವಿದ್ಯುತ್ ಸಂಪರ್ಕ ಹೊಂದಿರುವ ಪೆಂಡಾಲ್‌ಗಳಲ್ಲಿ ವಿದ್ಯುತ್ ಬಳಕೆ ಮತ್ತು ನಿರ್ವಹಣೆಯನ್ನು ಜಾಗರೂಕತೆಯಿಂದ ಮಾಡಬೇಕಾಗುತ್ತದೆ ಎಂದು ಎ‌ಸ್‌ಪಿ ತಿಳಿಸಿದರು.

ADVERTISEMENT

ಈಗಾಗಲೇ ಪಾರಾಂಡಹಳ್ಳಿ ಕೆರೆ ಹೂಳು ತೆಗೆಸಲಾಗಿದೆ. ಎಂಟು ನಗರಸಭೆ ಸಿಬ್ಬಂದಿ ಸದಾ ಕೆರೆಯಲ್ಲಿ ಕಾವಲಿರುತ್ತಾರೆ. ದೀಪಗಳು ಮತ್ತು ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಯೋಜಕರು ಕೆರೆಯಲ್ಲಿ ವಿಸರ್ಜನೆಗೆ ಇಳಿಯಲು ಅವಕಾಶ ನೀಡುವುದಿಲ್ಲ. ನಗರಸಭೆ ಸಿಬ್ಬಂದಿಯೇ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಿದ್ದಾರೆ. ಕ್ರೇನ್‌ ಮತ್ತು ಜೆಸಿಬಿ ಯಂತ್ರಗಳ ಮೂಲಕ ಗಣಪತಿಯ ವಿಗ್ರಹ ಜಖಂ ಆಗದಂತೆ ಮುಳುಗಿಸಲಾಗುವುದು ಎಂದು ನಗರಸಭೆ ಆಯುಕ್ತ ಪವನ್‌ಕುಮಾರ್ ತಿಳಿಸಿದ್ದಾರೆ.

ಸೋಮವಾರದಂದು ಬಹುತೇಕ ಗಣಪತಿ ಪೆಂಡಾಲ್‌ಗಳ ವ್ಯವಸ್ಥಾಪಕರು ಸಾಮೂಹಿಕ ವಿಸರ್ಜನೆ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.