ADVERTISEMENT

ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 15:26 IST
Last Updated 2 ಅಕ್ಟೋಬರ್ 2018, 15:26 IST
ಡಿಡಿಪಿಐ ಕೆ.ರತ್ನಯ್ಯ ಮತ್ತು ಸಿಬ್ಬಂದಿಯು ಗಾಂಧಿ ಜಯಂತಿ ಅಂಗವಾಗಿ ಕೋಲಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣವನ್ನು ಮಂಗಳವಾರ ಸ್ವಚ್ಛಗೊಳಿಸಿದರು.
ಡಿಡಿಪಿಐ ಕೆ.ರತ್ನಯ್ಯ ಮತ್ತು ಸಿಬ್ಬಂದಿಯು ಗಾಂಧಿ ಜಯಂತಿ ಅಂಗವಾಗಿ ಕೋಲಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣವನ್ನು ಮಂಗಳವಾರ ಸ್ವಚ್ಛಗೊಳಿಸಿದರು.   

ಕೋಲಾರ: ‘ಮಹಾತ್ಮ ಗಾಂಧೀಜಿ ವಿಭಿನ್ನ ಜಾತಿ, ಧರ್ಮಗಳನ್ನು ಸಂಘಟಿಸಿ ಏಕತೆ ಸಾಧಿಸಿದ ಹಿನ್ನೆಲೆಯಲ್ಲಿ ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಡಿಡಿಪಿಐ ಕಚೇರಿಯಲ್ಲಿ ಮಂಗಳವಾರ ನಡೆದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ‘ಗಾಂಧೀಜಿಯ ಸ್ವಚ್ಛ ಭಾರತದ ಕನಸನ್ನು ಶಾಲೆಗಳಲ್ಲಿ ಸಾಕಾರಗೊಳಿಸಬೇಕು. ಶಿಕ್ಷಕರು ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು’ ಎಂದರು.

‘ಹಿಂದಿನ ಕಾಲದಲ್ಲಿ ಗ್ರಾಮದ ಎಲ್ಲಾ ರಸ್ತೆ, ಚರಂಡಿಗಳನ್ನು ಜನರೇ ಶ್ರಮದಾನದ ಮೂಲಕ ಸ್ವಚ್ಛಗೊಳಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜನರಿಗೆ ಸ್ವಚ್ಛತೆಯ ಪ್ರಜ್ಞೆ ಇಲ್ಲವಾಗಿದೆ. ಗಾಂಧೀಜಿಯ ತತ್ವಗಳಲ್ಲಿ ಶ್ರಮದಾನ ಮತ್ತು ಸ್ವಚ್ಛತೆಗೆ ಹೆಚ್ಚಿನ ಮಹತ್ವವಿದ್ದು, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಭ್ರಷ್ಟಾಚಾರ ರಹಿತ ಹಾಗೂ ಸ್ವಚ್ಛ ಆಡಳಿತಕ್ಕೆ ಶಿಕ್ಷಕರು ಸಹಕರಿಸಬೇಕು. ಗಾಂಧೀಜಿಯ ಆದರ್ಶ ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಸಿ ಸತ್ಪ್ರಜೆಗಳಾಗಿ ಮಾಡಿ’ ಎಂದು ಹೇಳಿದರು.

ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯು ಕಚೇರಿ ಆವರಣದಲ್ಲಿ ಕಸ ತೆರವುಗೊಳಿಸಿದರು. ಕಚೇರಿ ವ್ಯವಸ್ಥಾಪಕ ಸುರೇಶ್, ಸೂಪರಿಂಟೆಂಡೆಂಟ್‌ ಸುಬ್ರಹ್ಮಣ್ಯಂ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಎಸ್.ಚೌಡಪ್ಪ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯಿತ್ರಿ, ನರಸಿಂಹರೆಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.