ADVERTISEMENT

ಗೌರಿ–ಗಣೇಶ ಹಬ್ಬ: ಪರಿಸರಸ್ನೇಹಿಯಾಗಿ ಆಚರಿಸಿ

ಅರಿಶಿಣದ ಮೂರ್ತಿ ಪೂಜಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಮನವಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 14:18 IST
Last Updated 6 ಸೆಪ್ಟೆಂಬರ್ 2021, 14:18 IST
ಪರಿಸರಸ್ನೇಹಿಯಾಗಿ ಗೌರಿ ಗಣೇಶ ಹಬ್ಬ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರು ಕೋಲಾರದಲ್ಲಿ ಸೋಮವಾರ ಜಾಗೃತಿಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು
ಪರಿಸರಸ್ನೇಹಿಯಾಗಿ ಗೌರಿ ಗಣೇಶ ಹಬ್ಬ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರು ಕೋಲಾರದಲ್ಲಿ ಸೋಮವಾರ ಜಾಗೃತಿಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು   

ಕೋಲಾರ: ‘ಜಿಲ್ಲೆಯ ಜನರು ಗೌರಿ ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು. ಕೆರೆ, ಜಲಾಶಯ ಸೇರಿದಂತೆ ಜಲ ಮೂಲಗಳು ಕಲುಷಿತವಾಗದಂತೆ ಗೌರಿ ಗಣೇಶ ಮೂರ್ತಿಗಳನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸಲಹೆ ನೀಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸುವ ಗಣೇಶ ಮೂರ್ತಿಗಳನ್ನು ಪೂಜಿಸುವ ಬದಲು ಮಣ್ಣಿನಿಂದ ಮಾಡಿದ ಅಥವಾ ಗೋಧಿ, ರಾಗಿ ಹಿಟ್ಟಿಗೆ ಅರಿಶಿಣ ಸೇರಿಸಿ ಸಣ್ಣ ಗಣೇಶ ಮೂರ್ತಿಗಳನ್ನು ತಯಾರಿಸಿ ಪೂಜಿಸಬೇಕು. ಆ ಮೂಲಕ ಪರಿಸರ ರಕ್ಷಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಹಬ್ಬ ಆಚರಣೆ ನೆಪದಲ್ಲಿ ಮೈಮರೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ನಗರಸಭೆ ಅಥವಾ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು’ ಎಂದು ಸೂಚಿಸಿದರು.

ADVERTISEMENT

‘ನಗರ ಪ್ರದೇಶದಲ್ಲಿ ವಾರ್ಡ್‌ಗೆ ಒಂದು ಕಡೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 5 ದಿನಕ್ಕಿಂತ ಹೆಚ್ಚಿನ ಅವಧಿಗೆ ಗಣೇಶೋತ್ಸವ ಆಚರಿಸುವಂತಿಲ್ಲ. ಗಣೇಶೋತ್ಸವದ ಆಯೋಜಕರು ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಮತ್ತು ಲಸಿಕೆ ಪಡೆದಿರುವ ಬಗ್ಗೆ ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣಪತ್ರ ಹೊಂದಿರಬೇಕು’ ಎಂದು ತಿಳಿಸಿದರು.

‘ಗಣೇಶೋತ್ಸವ ಆಯೋಜಕರು ಸ್ಥಳೀಯವಾಗಿ ಕೋವಿಡ್‌ ಲಸಿಕೆ ಅಭಿಯಾನ ಆಯೋಜಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಮನರಂಜನೆ ಕಾರ್ಯಕ್ರಮ ನಡೆಸುವಂತಿಲ್ಲ. ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಜನರನ್ನು ಸೇರಿಸಿ ಮೆರವಣಿಗೆ ಮಾಡುವಂತಿಲ್ಲ’ ಎಂದು ಆದೇಶಿಸಿದರು.

10 ಲಕ್ಷ ಮೂರ್ತಿ: ‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈ ವರ್ಷ 10 ಲಕ್ಷ ಅರಿಶಿಣ ಗಣೇಶ ಮೂರ್ತಿಗಳ ತಯಾರಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲೇ ಅರಿಶಿನದಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಪೂಜಿಸಿ ಮನೆಯಂಗಳದಲ್ಲೇ ವಿಸರ್ಜಿಸುವುದು ಸೂಕ್ತ’ ಎಂದು ಜಿಲ್ಲಾ ಪರಿಸರ ಅಧಿಕಾರಿ ಎಸ್.ರಾಜಶೇಖರ್‌ ಹೇಳಿದರು.

‘ಅರಿಶಿಣದಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಕೋವಿಡ್‌ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಜತೆಗೆ ಪರಿಸರ ಕಲುಷಿತವಾಗುವುದು ತಪ್ಪುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಪ ಪರಿಸರ ಅಧಿಕಾರಿ ಶಿವಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.