ADVERTISEMENT

ಲಿಂಗಾನುಪಾತ ವ್ಯತ್ಯಾಸ: ಅಪರಾಧ ಹೆಚ್ಚಳ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್ ಕಳವಳ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 16:51 IST
Last Updated 14 ನವೆಂಬರ್ 2019, 16:51 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಮಾತನಾಡಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಮಾತನಾಡಿದರು.   

ಕೋಲಾರ: ‘ಲಿಂಗಾನುಪಾತದಲ್ಲಿ ವ್ಯತ್ಯಾಸ ಇರುವುದರಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತ 1000:950ಕ್ಕಿಂತ ಕಡಿಮೆಯಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಲಿಂಗಾನುಪಾತ ವ್ಯತ್ಯಾಸದಿಂದ ಸಮಾಜದಲ್ಲಿ ಅಸಮತೋಲನ ಉಂಟಾಗಿ ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ’ ಎಂದು ವಿಷಾದಿಸಿದರು.

ADVERTISEMENT

‘ಹೆಣ್ಣು ಮಕ್ಕಳೆಂಬ ಕೀಳರಿಮೆ ಬೇಡ. ಇಂದು ಪ್ರತಿ ಕ್ಷೇತ್ರದಲ್ಲೇ ಬಾಲಕಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಭ್ರೂಣ ಹತ್ಯೆ ತಡೆಗೆ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಭ್ರೂಣ ಹತ್ಯೆ ಪ್ರಕರಣ ಗಮನಕ್ಕೆ ಬಂದರೆ ದೂರು ಕೊಡಬೇಕು. ಭ್ರೂಣ ಪತ್ತೆ ಮಾಡುವ ವೈದ್ಯರಿಗೆ 3 ವರ್ಷ ಶಿಕ್ಷೆಯಿದೆ’ ಎಂದು ವಿವರಿಸಿದರು.

‘ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗು ಜೀವಂತವಾಗಿರುವುದು ದೇಶದ ದುರಂತ. ಬಾಲ್ಯವಿವಾಹದ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಮದುವೆಗೆ ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ಕಡ್ಡಾಯವಾಗಿರಬೇಕು. ಈ ನಿಯಮ ಮೀರಿ ಮದುವೆ ಮಾಡಲು ಮುಂದಾದರೆ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ದೂರು ನೀಡಬೇಕು’ ಎಂದು ಮನವಿ ಮಾಡಿದರು ನೀಡಿದರು.

ಪ್ರತಿಜ್ಞೆ ಮಾಡಿ: ‘ಹೆಣ್ಣು ಮಕ್ಕಳನ್ನು ಉಳಿಸಿ ಯೋಜನೆ 2015ರಲ್ಲಿ ಜಾರಿಗೆ ಬಂದಿತು. ನಿಗದಿತ ವಯಸ್ಸಿಗೆ ಮುನ್ನ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಮಕ್ಕಳು ಪ್ರತಿಜ್ಞೆ ಮಾಡಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್ ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಮೊಬೈಲ್, ಟಿ.ವಿಗೆ ದಾಸರಾಗಬೇಡು, ದೈನಂದಿನ ಬದುಕಿನಲ್ಲಿ ಕಲಿಕೆಗೆ ಹೆಚ್ಚು ಒತ್ತು ಕೊಡಿ. ಸಮಾಜಕ್ಕೆ ಹೊರೆಯಾಗದೆ ಸತ್ಪ್ರಜೆಗಳಾಗಿ’ ಎಂದು ವಕೀಲ ಎ.ಎಸ್.ಅರವಿಂದಕುಮಾರ್ ಕಿವಿಮಾತು ಹೇಳಿದರು.

ಹೆಣ್ಣು ಮಕ್ಕಳಿಗಾಗಿ ರೂಪಿಸಿರುವ ಆರೋಗ್ಯ ವಿಮಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು. ವಕೀಲರಾದ ಸಿ.ಎನ್.ಬಸವರಾಜಪ್ಪ, ಕೆ.ಆರ್.ಧನರಾಜ್, ಎ.ಎಂ.ಅಪೂರ್ವ, ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸಚ್ಚಿದಾನಂದಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.