ADVERTISEMENT

ಕೃಷಿ ಸಚಿವರಿಗೆ ಘೇರಾವ್: ರೈತರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 5:19 IST
Last Updated 16 ನವೆಂಬರ್ 2020, 5:19 IST
ಕೋಲಾರದಲ್ಲಿ ಭಾನುವಾರ ಸಭೆ ನಡೆಸಿದ ರೈತ ಸಂಘದ ಮುಖಂಡರು ಕೃಷಿ ಸಚಿವರಿಗೆ ಘೇರಾವ್ ಮಾಡಲು ನಿರ್ಧರಿಸಿದರು.
ಕೋಲಾರದಲ್ಲಿ ಭಾನುವಾರ ಸಭೆ ನಡೆಸಿದ ರೈತ ಸಂಘದ ಮುಖಂಡರು ಕೃಷಿ ಸಚಿವರಿಗೆ ಘೇರಾವ್ ಮಾಡಲು ನಿರ್ಧರಿಸಿದರು.   

ಕೋಲಾರ: ರಾಗಿ ಬೆಳೆದ ರೈತರಿಗೆ ಕೃಷಿ ಇಲಾಖೆಯಿಂದ ಯಾವುದೇ ರೀತಿಯ ಅನುಕೂಲ ಮಾಡಿಕೊಡದೆ ಇರುವುದನ್ನು ಖಂಡಿಸಿ, ನ.17 ರಂದು ನಗರಕ್ಕೆ ಬರುವ ಕೃಷಿ ಸಚಿವರಿಗೆ ಘೇರಾವ್‌ ಮಾಡಲು ರೈತ ಸಂಘ ತೀರ್ಮಾನಿಸಿದೆ.

ನಗರದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಕೆ.ನಾರಾಯಣಗೌಡ, ‘ಜಿಲ್ಲೆಯಲ್ಲಿ ಎರಡು ದಶಕಗಳ ನಂತರ ಉತ್ತಮ ರಾಗಿ ಬೆಳೆ ಬಂದಿದೆ. ಆದರೆ ಬೆಳೆದ ರಾಗಿಯನ್ನು ಸಂರಕ್ಷಿಸಿಕೊಳ್ಳುವಲ್ಲಿ ರೈತರು ಕಷ್ಟಪಡುತ್ತಿದ್ದಾರೆ. ಮಳೆಯಿಂದ ರಾಗಿ ಮುಚ್ಚಲು ಟಾರ್ಪಲ್ ಕೊರತೆ ಎದುರಾಗಿದೆ. ಕೃಷಿ ಇಲಾಖೆಗೆ ಬರುವ ಟಾರ್ಪ‍ಲ್‌ಗಳನ್ನು ಪ್ರಭಾವಿ ಜನಪ್ರತಿನಿಧಿಗಳು ಪಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಪ್ರತಿ ಗ್ರಾಮಪಂಚಾಯಿತಿಗೆ ಒಂದು ರಾಗಿ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಾಲ್‌ಗೆ ₹5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರಸ್ತೆಗಳಲ್ಲಿ ರಾಗಿ ಒಕ್ಕಣೆ ಮಾಡುವವರಿಗೆ ಕರ ಪತ್ರ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಅವರಿಗೆ ಮನದಟ್ಟುಮಾಡಲು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಯಲು ಮಾಡಲು ಘೇರಾವ್ ಮಾಡಲಾಗುವುದು’ ಎಂದು ತಿಳಿಸಿದರು.

‘ಪ್ರತಿ ಗ್ರಾಮಪಂಚಾಯಿತಿಗೆ ಒಂದು ರಾಗಿ ಕಟಾವು ಮತ್ತು ಒಕ್ಕಣೆ ಯಂತ್ರವನ್ನು ಸರ್ಕಾರದಿಂದ ಉಚಿತವಾಗಿ ನೀಡಬೇಕು’ ಎಂದು ಮಹಿಳಾ ಘಟಕದ ಅಧ್ಯಕ್ಷ ಎ.ನಳಿನಿಗೌಡ ಒತ್ತಾಯಿಸಿದರು.

ರೈತಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮುಳಬಾಗಿಲು ಅಧ್ಯಕ್ಷ ಫಾರೂಖ್‍ಪಾಷ, ಮಾಲೂರು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಕೆಜಿಎಫ್ ಅಧ್ಯಕ್ಷ ಅಲ್ತಾಪ್ ಹುಸೇನ್, ಸ್ವಸ್ತಿಕ್ ಶಿವು, ಚಾಂದ್‍ಪಾಷ, ಜಮೀರ್ ಪಾಷ, ಹೆಬ್ಬಣಿ ಆನಂದರೆಡ್ಡಿ, ಸಾಗರ್, ರಂಜಿತ್, ನವೀನ್, ವೇಣು, ಕೇಶವ, ವಿಜಯ್‍ಪಾಲ್, ಸುಪ್ರಿಂಚಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.