ADVERTISEMENT

ದೃಷ್ಟಿ ನೀಡಿ ಬಾಳು ಬೆಳಗಿ

ನೇತ್ರ ತಪಾಸಣಾ ಶಿಬಿರದಲ್ಲಿ ಶಿಕ್ಷಣ ಸಂಯೋಜಕ ಶ್ರೀನಿವಾಸನ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 14:33 IST
Last Updated 10 ಏಪ್ರಿಲ್ 2021, 14:33 IST
ಭಾರತ ಸೇವಾದಳ ಜಿಲ್ಲಾ ಶಾಖೆಯು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಶಿಕ್ಷಕರ ಕಣ್ಣು ತಪಾಸಣೆ ಮಾಡಲಾಯಿತು.
ಭಾರತ ಸೇವಾದಳ ಜಿಲ್ಲಾ ಶಾಖೆಯು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಶಿಕ್ಷಕರ ಕಣ್ಣು ತಪಾಸಣೆ ಮಾಡಲಾಯಿತು.   

ಕೋಲಾರ: ‘ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎಂದು ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹೇಳಿದರು.

ಭಾರತ ಸೇವಾದಳ ಜಿಲ್ಲಾ ಶಾಖೆ, ರೋಟರಿ ಸೆಂಟ್ರಲ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಕಣ್ಣು ಇದ್ದವರು ಮಾತ್ರ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ಜನರು ಸ್ವಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು’ ಎಂದು ಕಿವಿಮಾತು ಹೇಳಿದರು.

‘ನೇತ್ರದಾನ ಮಹಾದಾನ. ಮನುಷ್ಯನ ದೇಹದ ಜತೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಬೇಕು. ಮನುಷ್ಯನ ದೇಹಕ್ಕೆ ಸಾವು ಬರುತ್ತದೆ. ಆದರೆ, ಕಣ್ಣಿಗೆ ಸಾವಿಲ್ಲ. ಕಣ್ಣುಗಳು ಅಮೂಲ್ಯ ಅಂಗಗಳು. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ದೃಷ್ಟಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ವಯೋಸಹಜವಾಗಿ ಕಣ್ಣುಗಳ ಸಮಸ್ಯೆ ಎದುರಾಗುತ್ತದೆ. ನಿಯಮಿತವಾಗಿ ಕಣ್ಣು ತಪಾಸಣೆ ಮತ್ತು ಆರೈಕೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 40 ವರ್ಷ ದಾಟಿದ ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ 2 ಬಾರಿ ಕಣ್ಣುಗಳ ತಪಾಸಣೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಆರೈಕೆಗೆ ಆದ್ಯತೆ: ‘ಮಧುಮೇಹ ಮತ್ತು ಇತರೆ ಆರೋಗ್ಯ ಸಮಸ್ಯೆ ಇದ್ದವರು ಕಣ್ಣುಗಳ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು. ಇಲ್ಲವಾದರೆ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಮನುಷ್ಯನ ಸಾವಿನ ನಂತರ ಕಣ್ಣುಗಳನ್ನು ಸುಡದೆ ಅಥವಾ ಮಣ್ಣು ಮಾಡದೆ ಅಂಧರಿಗೆ ದಾನ ಮಾಡುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಿ. ಸಾವಿನ ನಂತರ 6 ತಾಸಿನೊಳಗೆ ನೇತ್ರದಾನ ಮಾಡಬೇಕು’ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್‌ ವಿವರಿಸಿದರು.

‘ಜನರಿಗೆ ನೇತ್ರದಾನದ ಮಹತ್ವ ತಿಳಿಸಿ ಅಂಧರ ಬಾಳಿನಲ್ಲಿ ಬೆಳಕು ತರುವ ಕೆಲಸ ಮಾಡಬೇಕು. ವ್ಯಕ್ತಿಗೆ ಕಣ್ಣು ಇಲ್ಲದಿದ್ದರೆ ಜೀವನವೇ ಇಲ್ಲದಂತಾಗುತ್ತದೆ. ಪ್ರತಿನಿತ್ಯ ಸಾವಿರಾರು ಮಂದಿ ಸಾಯುತ್ತಾರೆ. ಆದರೆ, ಕಣ್ಣಿನ ಮಹತ್ವ ತಿಳಿಯದೆ ಅವರೆಲ್ಲಾ ನೇತ್ರದಾನ ಮಾಡುತ್ತಿಲ್ಲ’ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್ ವಿಷಾದಿಸಿದರು.

ಬಿಇಒ ಕಚೇರಿ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರ ಕಣ್ಣು ತಪಾಸಣೆ ಮಾಡಲಾಯಿತು. ಜಿಲ್ಲಾ ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.