ADVERTISEMENT

ಮನೆಯಲ್ಲೇ ಗುಡ್‌ ಫ್ರೈಡೇ ಆಚರಣೆ

ಬಾಗಿಲು ತೆರೆಯದ ಚರ್ಚ್‌ಗಳು: ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ರವಾನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 14:39 IST
Last Updated 10 ಏಪ್ರಿಲ್ 2020, 14:39 IST
ಕೊರೊನಾ ಸೋಂಕಿನ ಕಾರಣಕ್ಕೆ ದಿಗ್ಬಂಧನ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದವರು ಕೋಲಾರದ ಸಂತ ಮೇರಿಯಮ್ಮ ಚರ್ಚ್‌ ಬಂದ್ ಮಾಡಿ ಮನೆಗಳಲ್ಲೇ ಶುಕ್ರವಾರ ಗುಡ್‌ ಫ್ರೈಡೇ ಆಚರಿಸಿದರು.
ಕೊರೊನಾ ಸೋಂಕಿನ ಕಾರಣಕ್ಕೆ ದಿಗ್ಬಂಧನ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದವರು ಕೋಲಾರದ ಸಂತ ಮೇರಿಯಮ್ಮ ಚರ್ಚ್‌ ಬಂದ್ ಮಾಡಿ ಮನೆಗಳಲ್ಲೇ ಶುಕ್ರವಾರ ಗುಡ್‌ ಫ್ರೈಡೇ ಆಚರಿಸಿದರು.   

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ದಿಗ್ಬಂಧನ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಚರ್ಚ್‌ಗಳ ಬದಲಿಗೆ ಮನೆಗಳಲ್ಲೇ ಶುಭ ಶುಕ್ರವಾರ (ಗುಡ್‌ ಫ್ರೈಡೇ) ಆಚರಿಸಲಾಯಿತು.

ಸಾಮಾನ್ಯವಾಗಿ ಗುಡ್‌ ಫ್ರೈಡೇಗೆ ಮೊದಲು ಭಾನುವಾರ ಖರ್ಜೂರ ಗರಿಗಳ ಹಬ್ಬ ಆಚರಿಸಲಾಗುತ್ತದೆ. ನಂತರದ 4 ದಿನಗಳ ಕಾಲ ಪ್ರತಿನಿತ್ಯ ಸಂಜೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಆದರೆ, ಈ ಬಾರಿ ದಿಗ್ಬಂಧನದ ಕಾರಣಕ್ಕೆ ಚರ್ಚ್‌ಗಳಲ್ಲಿ ಪ್ರಾರ್ಥನೆ ರದ್ದುಪಡಿಸಲಾಗಿತ್ತು.

ಕೊರೊನಾ ಸೋಂಕಿನ ಭೀತಿ ಕಾರಣಕ್ಕೆ ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ಚರ್ಚ್‌ಗಳ ಬಾಗಿಲು ತೆರೆಯಲೇ ಇಲ್ಲ. ಕೆಲ ಚರ್ಚ್‌ ಪಾದ್ರಿಗಳು (ಫಾದರ್‌) ತಮ್ಮ ಚರ್ಚ್‌ನ ಸದಸ್ಯರಿಗೆವಾಟ್ಸ್‌ ಆ್ಯಪ್ ಹಾಗೂ ಯೂ–ಟ್ಯೂಬ್ ಮೂಲಕ ಶುಭ ಶುಕ್ರವಾರದ ಸಂದೇಶ ರವಾನಿಸಿದರು.

ADVERTISEMENT

‘ಗುಡ್‌ ಫ್ರೈಡೇ ದಿನದಂದು ಸಾಮಾನ್ಯವಾಗಿ ಚರ್ಚ್‌ಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಪ್ರಾರ್ಥನೆ ನಡೆಸಲಾಗುತ್ತದೆ. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿನ ಕಾರಣಕ್ಕೆ ಚರ್ಚ್‌ಗಳಲ್ಲಿ ಗುಡ್‌ ಫ್ರೈಡೇ ಆಚರಿಸದಂತಹ ವಾತಾವರಣ ನಿರ್ಮಾವಾಗಿದೆ’ ಎಂದು ಮೆಥೋಡಿಸ್ಟ್‌ ಚರ್ಚ್‌ನ ಮುಖಂಡ ಪ್ರಮೋದ್‌ಕುಮಾರ್‌ ತಿಳಿಸಿದರು.

ಜಿಲ್ಲಾ ಕೇಂದ್ರದ ಮೆಥೋಡಿಸ್ಟ್, ಸಂತ ಮೇರಿಯಮ್ಮ ಚರ್ಚ್‌ನವರು ತಮ್ಮ ಸಭೆಗಳ ಸದಸ್ಯರಿಗೆ ಆನ್‌ಲೈನ್‌ ಹಾಗೂ ಫೇಸ್‌ಬುಕ್ ಮೂಲಕ ಸಂದೇಶ ನೀಡಿದರು. ತಾಲ್ಲೂಕಿನ ಬೆತ್ತನಿ, ಈಲಂ, ಮಂಗಸಂದ್ರ, ಚಿನ್ನಾಪುರ, ಹರಳಕುಂಟೆ, ವಡಗೂರು, ವೇಮಗಲ್‌, ವಕ್ಕಲೇರಿ ಹಾಗೂ ನಡುಪಳ್ಳಿಯ ಚರ್ಚ್‌ಗಳಲ್ಲಿ ಶುಕ್ರವಾರದ ಪ್ರಾರ್ಥನೆ ರದ್ದುಪಡಿಸಲಾಯಿತು.

ಉಪವಾಸ ವ್ರತ: ಗುಡ್‌ ಫ್ರೈಡೇ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದಲ್ಲಿ ಕೆಲವರು ದಿನವಿಡೀ ಉಪವಾಸ ವ್ರತ ಆಚರಿಸಿದರು. ಮತ್ತೆ ಕೆಲವರು ಗಂಜಿ, ಪಾಯಸ, ಹಣ್ಣು ತಿಂದು ಪ್ರಾರ್ಥನೆಯಲ್ಲಿ ದಿನ ಕಳೆದರು.

‘ಯೇಸು ಮನುಷ್ಯನ ಪಾಪ ಪರಿಹಾರಕ್ಕಾಗಿ ತನ್ನನ್ನು ತಾನೇ ಬಲಿಯಾಗಿ ಸಮರ್ಪಿಸಿಕೊಂಡನು. ಯೇಸು ಶಿಲುಬೆಯಲ್ಲಿ ಪ್ರಾಣ ಬಿಡುವಾಗ ಆಡಿದ 7 ಮಾತುಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಆತನನ್ನು ನಂಬಿದವರಿಗೆ ದೇವರು ಸ್ವರ್ಗದ ಭಾಗ್ಯ ಕರುಣಿಸುವನು’ ಎಂದು ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್‌ ಪಿ.ಶಾಂತಕುಮಾರ್‌ ಸಂದೇಶ ನೀಡಿದರು.

‘ಇಂದು ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕಿನ ವಿಚಾರವನ್ನು 3 ಸಾವಿರ ವರ್ಷಗಳ ಹಿಂದೆಯೇ ಯೆಶಾಯ ಎಂಬ ಪ್ರವಾದಿ 26ನೇ ಅಧ್ಯಾಯದ 1 ಮತ್ತು 2ನೇ ವಚನದಲ್ಲಿ ಪ್ರಸ್ತಾಪಿಸಿದ್ದರು. ಆಮೋಸ ಎಂಬ ಪ್ರವಾದಿಯೂ ಈ ಬಗ್ಗೆ ಹೇಳಿದ್ದಾರೆ. ವಿಶ್ವಕ್ಕೆ ಗಂಢಾಂತರವಿದೆ. ಒಂದು ಕೀಟ ಇಡೀ ವಿಶ್ವವನ್ನು ಬಾಧಿಸುತ್ತದೆ ಜನ ಎಚ್ಚರಗೊಂಡು ಮನೆಗಳ ಬಾಗಿಲು ಮುಚ್ಚಿ ಎಂದು ಹೇಳಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.