ADVERTISEMENT

ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯ

ರೈತರ ಆರ್ಥಿಕ ಜೀವಾಳ: ರೇಷ್ಮೆ ಇಲಾಖೆ ಉಪ ನಿರ್ದೇಶಕ ಕಾಳಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 15:14 IST
Last Updated 16 ಸೆಪ್ಟೆಂಬರ್ 2021, 15:14 IST

ಕೋಲಾರ: ‘ಚೀನಾ ರೇಷ್ಮೆ ಆಮದು ತಡೆ ಜತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿ ರೇಷ್ಮೆ ಕೃಷಿ ನಿರ್ವಹಣೆ ಮಾಡಲು ರೈತರು ತಾಂತ್ರಿಕ ಅರಿವು ಪಡೆಯಬೇಕು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಟಿ.ಎಂ.ಕಾಳಪ್ಪ ಕಿವಿಮಾತು ಹೇಳಿದರು.

ತಾಲ್ಲೂಕಿನ ವೇಮಗಲ್ ರೇಷ್ಮೆ ರೈತ ಉತ್ಪಾದನಾ ಸಂಸ್ಥೆ ವತಿಯಿಂದ ಬೀಚಗೊಂಡಹಳ್ಳಿಯಲ್ಲಿ ಗುರುವಾರ ರೈತ ಆಸಕ್ತ ಗುಂಪುಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರೇಷ್ಮೆ ಕೃಷಿಯು ಇಂದು ರೈತರ ಆರ್ಥಿಕ ಜೀವಾಳವಾಗಿದೆ. ಈ ಉದ್ಯಮದಲ್ಲಿ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸುವ ಹಾದಿಯಲ್ಲಿ ಇಲಾಖೆ ನೀಡುವ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು. ನೂಲು ಬಿಚ್ಚಾಣಿಕೆದಾರರು ಗುಣಮಟ್ಟದ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಯೊಡ್ಡುತ್ತಾರೆ. ರೈತರು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದು ನಿಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ರೇಷ್ಮೆ ಇಲಾಖೆಯಲ್ಲಿ ಹಲವು ಯೋಜನೆಗಳಿದ್ದು, ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಿಪ್ಪುನೇರಳೆ ಬೆಳೆಯಬೇಕು. ವಿದೇಶಿ ಪೈಪೋಟಿಗೆ ಅನುಗುಣವಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು’ ಎಂದರು.

‘ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ರೈತರು ಗುಣಮಟ್ಟದ ರೇಷ್ಮೆ ಉತ್ಪಾದಿಸಿದರೆ ನೂಲು ಬಿಚ್ಚಾಣಿಕೆದಾರರು ಸ್ವದೇಶಿ ನೂಲು ಖರೀದಿಸುತ್ತಾರೆ. ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ಸಲಹೆ ನೀಡಿದರು.

ಉತ್ತಮ ಭವಿಷ್ಯ: ‘ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ. ದ್ವಿತಳಿ ಮತ್ತು ಹೈಬ್ರೀಡ್‌ ರೇಷ್ಮೆ ಹುಳು ತಳಿ ಬಳಸಿಕೊಂಡು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಬೇಕು. ಭವಿಷ್ಯದಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಲಿದೆ. ರೈತರು ನರೇಗಾದಡಿ ಹಿಪ್ಪುನೇರಳೆ ತೋಟದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಗುಣಮಟ್ಟದ ಹಿಪ್ಪುನೇರಳೆ ಬೆಳೆಯಲು ಗಮನ ಹರಿಸಬೇಕು’ ಎಂದು ಇಲಾಖೆ ಜಂಟಿ ನಿರ್ದೇಶಕ ಭೀಮಣ್ಣ ಸೂಚಿಸಿದರು.

‘ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯ ಸರ್ಕಾರವು ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸುವ ಪ್ರಯತ್ನ ನಡೆಸಿದೆ. ದಲ್ಲಾಳಿಗಳ ಹಾವಳಿ ತಪ್ಪಿಸಿ ಸೂಕ್ತ ಮಾರುಕಟ್ಟೆ ಒದಗಿಸುವುದು ಇದರ ಉದ್ದೇಶ. ರೈತರು ಉತ್ಪಾದಕ ಸಂಸ್ಥೆಗಳ ರಚನೆಗೆ ಮುಂದಾಗಬೇಕು’ ಎಂದು ತಿಳಿಸಿದರು.

ಮಣ್ಣು ಪರೀಕ್ಷೆ: ‘ಜಿಲ್ಲೆಯ ರೈತರು ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದಿದ್ದಾರೆ. ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಸುಣ್ಣಕಟ್ಟು ರೋಗ ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದರೆ ಹೆಚ್ಚು ಇಳುವರಿ ಪಡೆಯಬಹುದು’ ಎಂದು ವೇಮಗಲ್ ರೇಷ್ಮೆ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಕೆ.ಜಿ.ದೇವರಾಜ್ ವಿವರಿಸಿದರು.

ಮೈರಾಡ ಸಂಸ್ಥೆ ಜಿಲ್ಲಾ ಸಂಯೋಜಕ ಎಸ್.ಧನಂಜಯ, ರೈತ ಮುಖಂಡ ಹೊಳಲಿ ಪ್ರಕಾಶ್, ಕೆನರಾ ಬ್ಯಾಂಕ್‌ ಆರ್ಥಿಕ ಸಲಹೆಗಾರರಾದ ವಿಶಾಲಾಕ್ಷಿ, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಜೈಶಂಕರ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶಶಿಧರ್, ಆನಂದ್‌ಕುಮಾರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.