
ಕೋಲಾರ: ‘ಸರ್ಕಾರಿ ವೈದ್ಯರು ಕೆಲಸದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ಅಥವಾ ಬೇರೆ ಕಡೆ ಕೆಲಸ ಮಾಡದಂತೆ ತಡೆಯಲು ನಿಗಾ ವ್ಯವಸ್ಥೆ ರೂಪಿಸಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲಾಖೆಯಲ್ಲಿ ಹೊಸ ಹಾಜರಿ ಪದ್ಧತಿ ಜಾರಿ ಮಾಡಿದ್ದು, ಮುಖಚರ್ಯೆ ಗುರುತಿಸುವಿಕೆ ಮೂಲಕ ಹಾಜರಿ ಹಾಕಲಾಗುತ್ತಿದೆ. ಶೇ 90 ವೈದ್ಯರು ಈಗಾಗಲೇ ನೋಂದಣಿ ಆಗಿದ್ದಾರೆ ಎಂದು ತಿಳಿಸಿದರು.
‘ಬೆಳಿಗ್ಗೆ 9ಗಂಟೆಗೆ ಆಸ್ಪತ್ರೆಗೆ ಬಂದು ತಮ್ಮ ಮೊಬೈಲ್ ಫೋನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು. ಆಗ ಕೆಲಸದ ಸ್ಥಳ ಮ್ಯಾಪ್ ಆಗುತ್ತದೆ, ಮುಖಚರ್ಯೆ ದಾಖಲಾಗುತ್ತದೆ. ಮತ್ತೆ ಸಂಜೆ 4ಕ್ಕೆ ಇದೇ ಪ್ರಕ್ರಿಯೆ ಮಾಡಬೇಕು. ಈ ಅವಧಿಯಲ್ಲಿ ಕೆಲಸದ ಸ್ಥಳದಿಂದ ಹೊರ ಹೋಗುವುದರ ಪರಿಶೀಲನೆಗೆ ವ್ಯವಸ್ಥೆ ಮಾಡಿದ್ದೇವೆ. ಸಿಕ್ಕಿಬಿದ್ದರೆ ಕ್ರಮ ನಿಶ್ಚಿತ’ ಎಂದರು.
‘ಇದಲ್ಲದೇ, ಕೆಲಸದ ವೈಖರಿ ಮೇಲೂ ನಿಗಾ ಇಟ್ಟಿದ್ದೇವೆ. ಶಸ್ತ್ರಚಿಕಿತ್ಸಕ ಎಷ್ಟು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ? ಪ್ರಸೂತಿತಜ್ಞರು ಎಷ್ಟು ಹೆರಿಗೆ ಮಾಡಿಸಿದ್ದಾರೆ? ಹೀಗೆ, ವೈದ್ಯರ ಕಾರ್ಯವೈಖರಿ ಮ್ಯಾಪ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಇಲ್ಲ. 1,600 ಮಂದಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಕೆಲವೆಡೆ ತಜ್ಞ ವೈದ್ಯರ ಕೊರತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.