ADVERTISEMENT

ಸರ್ಕಾರಿ ಆಸ್ಪತ್ರೆ | ಒಳ್ಳೆಯ ಅಭಿಪ್ರಾಯ ಮೂಡಿಸಿ: ಶಾಸಕ ಕೊತ್ತೂರು ಮಂಜುನಾಥ್

ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:50 IST
Last Updated 31 ಆಗಸ್ಟ್ 2025, 7:50 IST
ಕೋಲಾರದಲ್ಲಿ ಶನಿವಾರ ಶಾಸಕ ಕೊತ್ತೂರು ಮಂಜುನಾಥ್‌ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು
ಕೋಲಾರದಲ್ಲಿ ಶನಿವಾರ ಶಾಸಕ ಕೊತ್ತೂರು ಮಂಜುನಾಥ್‌ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು   

ಕೋಲಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಆಸ್ಪತ್ರೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಿ ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು

ನಗರದ ಹೊರವಲಯದಲ್ಲಿರುವ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಕುಂದುಕೊರತೆ ಹಾಗೂ ಅದಕ್ಕೆ ಪರಿಹಾರಗಳ ಬಗ್ಗೆ ಮಾಹಿತಿ ಪಡೆದರು.

ADVERTISEMENT

‘ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಕಾರಣ ಜನರಿಗೆ ಬೇಸರವಿದ್ದು, ಖಾಸಗಿ ಆಸ್ಪತ್ರೆಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಅದನ್ನು ದೂರ ಮಾಡಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ತರುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕು’ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದಿಂದ ದೊರೆಯುವ ಉಚಿತ ಔಷಧಿ ಪೂರೈಕೆ, ಆ್ಯಂಬುಲೆನ್ಸ್, ಬೆಡ್ ಲಭ್ಯತೆ, ಆಮ್ಲಜನಕ ಕೊರತೆಯಾಗಬಾರದು. ಉಚಿತ ಆರೋಗ್ಯ ಸೌಲಭ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಯಾವುದೇ ಕಾರಣಕ್ಕೂ ಬಡವರು ಆರೋಗ್ಯ ವಂಚಿತರಾಗಬಾರದು. ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಹೇಳಿದರು.

ತಾಲ್ಲೂಕಿನಲ್ಲಿರುವ ಆಸ್ಪತ್ರೆಗಳ ಅಭಿವೃದ್ಧಿ ಕುರಿತು ಚರ್ಚಿಸಿ, ತಮ್ಮ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸಲಿದೆ. ಯಾವುದೇ ಸಮಸ್ಯೆ ಇದ್ದರೂ ಸರ್ಕಾರ ಪರಿಹಾರ ಒದಗಿಸಲಿದೆ. ಶಿಕ್ಷಣ, ಆರೋಗ್ಯ ಸರಿಯಾದರೆ ಎಲ್ಲವೂ ಸರಿಹೋಗುತ್ತದೆ. ಇವುಗಳ ಕಡೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ಮಾತನಾಡಿ, ‘ಜಿಲ್ಲಾ ಆಸ್ಪತ್ರೆಯಲ್ಲಿ ಖಾಸಗಿ ಆ್ಯಂಬುಲೆನ್ಸ್‌ಗಳನ್ನು ದೂರವಿಟ್ಟು ನಾಲ್ಕು ಸರ್ಕಾರಿ ಆ್ಯಂಬುಲೆನ್ಸ್ ಬಳಕೆ ಮಾಡಿಕೊಳ್ಳಲಾಗಿದೆ. ಚಿರಶಾಂತಿ ವಾಹನವನ್ನು ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಶಾಸಕರಿಗೆ ಮನವಿ ಮಾಡಿದರು.

ಹೊಸ ವಾಹನ ಕೊಡಿಸಲು ಕೊತ್ತೂರು ಮಂಜುನಾಥ್ ಸಮ್ಮತಿ ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ತಹಶೀಲ್ದಾರ್ ಡಾ.ನಯನಾ, ಜಿಲ್ಲಾ ಆರೋಗ್ಯಧಿಕಾರಿ ಡಾ.ಶ್ರೀನಿವಾಸ್ ಹಾಗೂ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸಾಕಷ್ಟು ಪ್ರಯತ್ನ ಮಾಡಿ ಜಾರಿ ಮಾಡಿಸಲಾಗಿದೆ. ಆದರೆ ನಮ್ಮ ಗಮನಕ್ಕೆ ಬಾರದೆ ಸ್ಥಳ ಪರಿಶೀಲಿಸಲು ಅಧಿಕಾರಿಗಳು ಬಂದಿದ್ದಾರೆ
ಕೊತ್ತೂರು ಮಂಜುನಾಥ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.