
ಕೋಲಾರ: ಜಿಲ್ಲೆಯ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಾಗಿರುವ ವೈದ್ಯಕೀಯ ಕಾಲೇಜನ್ನು ಸರ್ಕಾರದಿಂದಲೇ ನಿರ್ಮಿಸಲು ಉದ್ದೇಶಿಸಿದ್ದು, ₹ 300 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂಬರುವ ಬಜೆಟ್‌ನಲ್ಲಿ ಘೋಷಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ ಕಾರ್ಯಕ್ರಮ ಹಾಗೂ ನಂತರ ಸುದ್ದಿಗಾರರೊಂದಿಗೆ ಮಾತನಾಡುವ ಈ ಮಾಹಿತಿ ನೀಡಿದರು.
ಕಳೆದ ಬಜೆಟ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಘೋಷಿಸಲಾಗಿತ್ತು. ಮುಖ್ಯಮಂತ್ರಿ ಜೊತೆ ಮಾತನಾಡಿ ಆ ಯೋಜನೆ ಕೈಬಿಡಲಾಗಿದೆ. ಜಿಲ್ಲಾಸ್ಪತ್ರೆ ಸೇರಿಕೊಂಡು ಪ್ರವಾಸಿ ಮಂದಿರ, ರೇಷ್ಮೆ ಇಲಾಖೆಯ ಸುಮಾರು 23 ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗುವುದು. ಈ ಸಂಬಂಧ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ಸರ್ಕಾರ ಬಂದ ಎರಡೂವರೆ ವರ್ಷಗಳಲ್ಲಿ ಸುಮಾರು ₹ 10 ಸಾವಿರ ಕೋಟಿ ಅನುದಾನ ತಂದು ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ನೀಡಲಾಗಿದೆ. ಕೋಲಾರ ತಾಲ್ಲೂಕಿಗೆ ₹ 1.5 ಸಾವಿರ ಕೋಟಿ ಅನುದಾನ ಲಭಿಸಿದೆ.ಜೊತೆಗೆ ಗ್ಯಾರಂಟಿ ನೀಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಆಗುವ ಹಂತದಲ್ಲಿದೆ. ಈ ಬಗ್ಗೆ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರೇ ಹೇಳಿದ್ದಾರೆ. ಮುಂದಿನ ಬಜೆಟ್‌ನಲ್ಲಿ ನಿರೀಕ್ಷೆ ಮಾಡಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.