ADVERTISEMENT

ಕೋಲಾರ | ವಿವಿಧ ಬಡಾವಣೆಗಳ ಗಣಪನ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:20 IST
Last Updated 1 ಸೆಪ್ಟೆಂಬರ್ 2025, 7:20 IST
ಕೋಲಾರದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಪ್ರತಿಷ್ಠಾಪಿಸಿದ್ದ ಗಣೇಶೋತ್ಸವದ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಭಾನುವಾರ ಗಣ್ಯರು ಚಾಲನೆ ನೀಡಿದರು
ಕೋಲಾರದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಪ್ರತಿಷ್ಠಾಪಿಸಿದ್ದ ಗಣೇಶೋತ್ಸವದ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಭಾನುವಾರ ಗಣ್ಯರು ಚಾಲನೆ ನೀಡಿದರು   

ಕೋಲಾರ: ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಭವ್ಯ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಭಾನುವಾರ ಅದ್ದೂರಿಯಿಂದ ನಡೆಯಿತು. ಯುವಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ನೇತೃತ್ವ ವಹಿಸಿದ್ದರು.

ಎಸ್‌ಎನ್‌ಆರ್‌ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಆಪರೇಷನ್ ಸಿಂಧೂರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) 100ರ ಸಂಭ್ರಮವನ್ನು ಗೌರವಿಸುವ ಸೈನಿಕ್ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನೂ ವಿಸರ್ಜಿಸಲಾಯಿತು.

ವಿಸರ್ಜನಾ ಪೂರ್ವ ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ವಿವಿಧ ಕಲಾ ತಂಡಗಳಿಗೆ ತಮಟೆ, ಡೊಳ್ಳು ಮತ್ತಿತರ ಕಲಾಪ್ರಾಕಾರಗಳು ಜತೆಗೂಡಿದ್ದು, ತಮಟೆ ನಾದಕ್ಕೆ ಜನತೆ ಕುಣಿದು ಕುಪ್ಪಳಿಸಿದರು. ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಬಂದ ಮೆರವಣಿಗೆ ಸಂಜೆ ಕೋಲಾರಮ್ಮ ಕೆರೆ ಬಳಿಯ ಕೊನೆಗೊಂಡು ಗಣಪ ಮೂರ್ತಿಗಳನ್ನು ಕೊಳದಲ್ಲಿ ವಿಸರ್ಜಿಸಲಾಯಿತು.

ADVERTISEMENT

ಯುವಕರ ಗುಂಪು ಕೇಸರಿ ಶಾಲು ಹಾಕಿಕೊಂಡು ಮೆರವಣಿಗೆಯಲ್ಲಿ ನೃತ್ಯ ಮಾಡಿದರು. ಶಿವಾಜಿ ಸೇರಿದಂತೆ ವಿವಿಧ ವೇಷತೊಟ್ಟ ಗಮನ ಸೆಳೆದರು. ಮೆರವಣಿಗೆಯು ಶಿಸ್ತುಬದ್ಧವಾಗಿ ಸಾಗಲು ಶ್ರಮಿಸಿದ್ದು, ಇಡೀ ರಸ್ತೆಗಳೆಲ್ಲಾ ಕೇಸರಿಮಯವಾಗಿತ್ತು.

ಮೆರವಣಿಗೆಗೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಚಾಲನೆ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿಯಿಂದ ದೇಶ ರಕ್ಷಣೆಗಾಗಿ ಗಣೇಶೋತ್ಸವದ ಮೂಲಕ ಒಗ್ಗೂಡಿದ ಜನತೆ ಇಂದು ಧರ್ಮ ರಕ್ಷಣೆಗಾಗಿ ಈ ಕಾರ್ಯಕ್ರಮದಲ್ಲಿ ಒಗ್ಗೂಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, 12 ವರ್ಷಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಯಾವುದೇ ಪಕ್ಷ, ಜಾತಿಗೆ ಸೀಮಿತಗೊಳಿಸದೆ ನಗರದ ಎಲ್ಲಾ ವರ್ಗದ ಜನಾಂಗದವರು ಸೇರಿ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಅಖಂಡ ಭಾರತ ವಿನಾಯಕ ಮಹಾಸಭಾ ಗಣೇಶೋತ್ಸವ ತಮ್ಮ ಕನಸಾಗಿದೆ. ಈ ಕಾರ್ಯಕ್ಕೆ ಬಿಜೆಪಿ, ಹಿಂದೂಪರ ಸಂಘಟನೆಗಳ ಅನೇಕ ಮುಖಂಡರು ಕೈಜೋಡಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ವರ್ಷಕ್ಕೊಂದು ಆಶಯವನ್ನು ವೇದಿಕೆಯಲ್ಲಿ ಪ್ರಚಾರಪಡಿಸುತ್ತಿದ್ದು, ಈ ಬಾರಿ ವಿಶ್ವದ ಗಮನ ಸೆಳೆದ ನಮ್ಮ ಭಾರತೀಯ ಸೈನಿಕರ ಆಪರೇಷನ್ ಸಿಂಧೂರ ಗಣೇಶೋತ್ಸವದ ವಿಶೇಷವಾಗಿತ್ತು ಎಂದು ತಿಳಿಸಿದರು.

ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು. ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಡಿವೈಎಸ್‍ಪಿ ಎಂ.ಎಚ್‌.ನಾಗ್ತೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ನಗರಸಭಾ ಸದಸ್ಯ ಮಂಜುನಾಥ್, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಸಾ.ಮಾ.ಬಾಬು, ನಾಮಲ್ ಮಂಜು, ಎಬಿವಿಪಿ ಹರೀಶ್, ನಾಗೇಂದ್ರ, ಸಂಪತ್, ಸುರೇಶ್, ಅಡಿಕೆ ನಾಗ, ಕುಮ್ಮಿ, ಕೆಟಿ ಶಿವು, ಶಿವಕುಮಾರ್, ಸಿದ್ದು, ಗಂಗಾಧರ್, ಅಮರ್, ಭರತ್, ಬಾಲಾಜಿ, ಬಾಬು, ತಿಮ್ಮರಾಯಪ್ಪ, ವಿಜಯಕುಮಾರ್, ಶಿಳ್ಳೆಂಗರೆ ಮಹೇಶ್ ಇದ್ದರು.

ಗಣೇಶೋತ್ಸವ: ಕೋಲಾರ ನಗರದ ಸಂತೇಗೇಟ್‍ನಲ್ಲಿ ಶ್ರೀಸಾಯಿ ಗಣೇಶ ಮಿತ್ರ ಬಳಗದಿಂದ ನೂರಾರು ಯುವಕರು ಗಣೇಶೋತ್ಸವ ಆಚರಿಸಿದರು. ವಿವಿಧ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದರು.

ಕ್ರೇನ್‌ ನೆರವಿನಿಂದ ಕೊಳದಲ್ಲಿ ಗಣೇಶನ ಮೂರ್ತಿ ವಿಸರ್ಜಿಸಿದ ಸಂದರ್ಭ
ವಿಸರ್ಜನೆಗೆಂದು ಕೊಳದ ಬಳಿ ತರಲಾಗಿದ್ದ ಗಣಪನ ಮೂರ್ತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.