
ಮುಳಬಾಗಿಲು: ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ಭಾನುವಾರ ‘ಮುಳಬಾಗಿಲು ಕನ್ನಡ ಉತ್ಸವ’ ಅದ್ದೂರಿಯಾಗಿ ನಡೆಯಿತು.
ಉತ್ಸವದ ಅಂಗವಾಗಿ ಕನ್ನಡ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಿಂದ ಮುಳಬಾಗಿಲು ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಹೌಸಿಂಗ್ ಬೋರ್ಡ್‌ನಿಂದ ನೇತಾಜಿ ಕ್ರೀಡಾಂಗಣದವರೆಗೂ ನೂರಾರು ವಾಹನಗಳಲ್ಲಿ ಬೈಕ್ ರ್‍ಯಾಲಿ ಹಾಗೂ ತಾಲ್ಲೂಕು ಆಟೊ ಚಾಲಕರ ಸಂಘದ ವತಿಯಿಂದ ಆಟೊ ರ್‍ಯಾಲಿ ನಡೆಯಿತು.
ನೂರಾರು ಮಂದಿ ಬೈಕ್ ಹಾಗೂ ಆಟೊಗಳಿಗೆ ಕನ್ನಡ ಬಾವುಟ ಕಟ್ಟಿ, ಕನ್ನಡಾಭಿಮಾನಿಗಳು ಕನ್ನಡಾಂಬೆಯ ಬಾವುಟ ಹಿಡಿದು ಕನ್ನಡ ಸಾಧಕರಿಗೆ ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗುತ್ತಾ ಸಾಗಿದರು.
ನಂತರ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕನ್ನಡಾಂಬೆಯ ಭಾವಚಿತ್ರವನ್ನು ಪುಷ್ಪಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಕನ್ನಡಾಭಿಮಾನಿಗಳು ಪಲ್ಲಕ್ಕಿಯ ಮೇಲೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಹಾಗೂ ಸಿನಿಮಾ ಕ್ಷೇತ್ರಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿರುವ ಡಿವಿಜಿ ಮತ್ತು ನಟಿ ಸೌಂದರ್ಯ ಅವರು ಜನಿಸಿದ ಮುಳಬಾಗಿಲು ತಾಲ್ಲೂಕಿನಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕಿದೆ ಎಂದರು.
ತಾಲ್ಲೂಕಿನ ಗಡಿಯಲ್ಲಿರುವ 18ಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಹಾಗಾಗಿ ಸರ್ಕಾರ ಯಾವುದೇ ಶಾಲೆಯನ್ನು ಮುಚ್ಚದೆ ಎಲ್ಲವನ್ನೂ ಉಳಿಸುವ ಕೆಲಸ ಮಾಡಬೇಕು. ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕನ್ನು ಸರ್ವತೋಮುಖ ರೀತಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ಭಾನುವಾರ ಸಂಜೆ ಕನ್ನಡದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಕುರಿ ಪ್ರತಾಪ್, ಮಂಜು ಪಾವಗಡ, ಜಗ್ಗಪ್ಪ ಮತ್ತಿತರರ ಕಲಾವಿದರಿಂದ ರಸ ಸಂಜೆ, ಹಾಸ್ಯ ಸಂಜೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ತಹಶೀಲ್ದಾರ್ ವಿ.ಗೀತಾ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಂಕರ್ ಕೇಸರಿ, ರಘುಪತಿ ರೆಡ್ಡಿ, ಮುನಿಸ್ವಾಮಿ ಗೌಡ, ಗೊಲ್ಲಹಳ್ಳಿ ಜಗದೀಶ್, ಹರೀಶ್ ಗೌಡ, ಹುಸೇನ್, ಚೋಳಂಗುಂಟೆ ಹರೀಶ್, ಪ್ರಕಾಶ್ ಗೌಡ ಹಾಗೂ ನೂರಾರು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.