ಮುಳಬಾಗಿಲು: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಮಾಹಿತಿ ಮಂಡಿಸಿದರು. ಆಹಾರ ಇಲಾಖೆಯಲ್ಲಿ ಆಹಾರ ವಸ್ತುಗಳ ವಿತರಣೆಗೆ ಸಮಯ ತೆಗೆದುಕೊಳ್ಳುತ್ತಿದ್ದು, ಸಮಯಕ್ಕೆ ಸರಿಯಾಗಿ ಆಹಾರ ವಿತರಣೆ ಮಾಡಬೇಕು. ಜೊತೆಗೆ ವಿವರವನ್ನು ನೋಟಿಸ್ ನಾಮಫಲಕದಲ್ಲಿ ಮಾಹಿತಿ ತೋರಿಸುವಂತೆ ಸದಸ್ಯರು ಕೋರಿದರು.
ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಕೆ.ಎನ್.ಉಮಾಶಂಕರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಅನುದಾನ ಬಿಡುಗಡೆ ಬಾಕಿ ಇದೆ. ಜಿಲ್ಲಾ ಕೇಂದ್ರ ಕಚೇರಿಯಿಂದ ಬಿಡುಗಡೆಯಾದ ನಂತರ ಅನುದಾನ ಬಿಡುಗಡೆ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವತಿಯಿಂದ ತಾಲ್ಲೂಕಿನ ಎಂ.ಹೊಸಳ್ಳಿ, ಸಾತನೂರು, ದಿನ್ನಳ್ಳಿ, ಹರಪ ನಾಯಕನಹಳ್ಳಿ ಕ್ರಾಸ್, ಎಚ್.ಗೊಲ್ಲಹಳ್ಳಿ ಕ್ರಾಸ್, ತಾವರೆಕೆರೆ, ದುಗ್ಗಸಂದ್ರ, ಕಾಡೇನಹಳ್ಳಿ, ಪೆದ್ದೂರು, ಬೈಯಪ್ಪನಹಳ್ಳಿ, ಚಿನ್ನಹಳ್ಳಿ ಮಾರ್ಗವಾಗಿ ಸೆ.30ರಂದು ಬೆಳಗ್ಗೆ 9.30ಕ್ಕೆ ಬಸ್ ಚಾಲನೆ ನೀಡಬೇಕೆಂದು ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು.
ಗ್ಯಾರಂಟಿ ಯೋಜನೆಯ ಅನುಷ್ಠಾನ ಕಾರ್ಯದರ್ಶಿ ಡಾ.ಕೆ.ಸರ್ವೇಶ್ ಮಾತನಾಡಿ, ಯುವನಿಧಿಯ ಬಾಕಿ ಉಳಿದಿರುವ ವಿದ್ಯಾರ್ಥಿಗಳ ಹಣ ಬಿಡುಗಡೆ ಮಾಡುವುದು. ಜೊತೆಗೆ ಯಾರು ನೋಂದಣಿಯಾಗದವರು ಅಂತಹವರು ಅಕ್ಟೋಬರ್ ತಿಂಗಳಲ್ಲಿ ನೊಂದಣಿ ಮಾಡಿಕೊಳ್ಳಿ. ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಸದಸ್ಯರ ಮೂಲಕ ಯುವನಿಧಿ ವಂಚಿತ ಯುವಕರಿಗೆ ನೋಂದಣಿ ಮಾಡಿಸಿಕೊಳ್ಳಲು ಜಾಗೃತಿ ಮಾಡಿಸಬೇಕು ಎಂದು ಹೇಳಿದರು.
ಕೆಎಸ್ಆರ್‌ಟಿಸಿ, ಆಹಾರ ಇಲಾಖೆಯ ಅಧಿಕಾರಿ ಹಾಗೂ ಗ್ಯಾರಂಟಿ ಸಮಿತಿಯ ಎಲ್ಲಾ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.