ಕೋಲಾರ: ಗುರು ಪೂರ್ಣಿಮೆ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಗುರುವಿನ ದರ್ಶನಕ್ಕಾಗಿ ಭಕ್ತಸಾಗರವೇ ಸೇರಿತ್ತು. ದಿನವಿಡೀ ವಿಶೇಷ ಪೂಜೆ, ವಾದ್ಯಗೋಷ್ಠಿ, ಪ್ರಸಾದ ವಿತರಣೆ, ಅನ್ನದಾಸೋಹ ನಡೆಯಿತು.
ಮುಂಜಾನೆಯಿಂದಲೇ ಗುರುವಿನ ಕೃಪೆ ಪಡೆಯಲು ಸಹಸ್ರಾರು ಮಂದಿ ಸರದಿ ಸಾಲಿನಲ್ಲಿ ನಿಂತಿದ್ದರು. ಬಾಬಾ ಮಂದಿರದಿಂದ ರೈಲ್ವೆ ನಿಲ್ದಾಣದವರೆಗೆ ಆ ಸಾಲು ಬೆಳೆದಿತ್ತು. ಮುಂಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿತು. ದೇವಾಲಯವನ್ನು ವಿವಿಧ ರೀತಿಯ ಹೂಗಳಿಂದ ವಿಶಿಷ್ಟವಾಗಿ ಅಲಂಕಾರ ಮಾಡಲಾಗಿತ್ತು.
ಭಕ್ತರ ಅನುಕೂಲಕ್ಕಾಗಿ ಹಾಗೂ ದರ್ಶನಕ್ಕೆ ಬಂದ ಸಹಸ್ರಾರು ಮಂದಿಯನ್ನು ನಿಯಂತ್ರಿಸಲು ಮಂದಿರದ ಮುಂಭಾಗ ಬ್ಯಾರಿಕೇಡ್ ನಿರ್ಮಿಸಲಾಗಿತ್ತು. ಪೊಲೀಸರು ನಿಗಾ ವಹಿಸಿದ್ದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
25 ಸಾವಿರಕ್ಕೂ ಅಧಿಕ ಮಂದಿ ಮಂದಿರಕ್ಕೆ ಬಂದು ಸಾಯಿಬಾಬಾನ ದರ್ಶನ ಪಡೆದರು. ಎಲ್ಲರಿಗೂ ಹಬ್ಬದೂಟ ಬಡಿಸಲಾಯಿತು. ಸಮೀಪದ ರೈಲು ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವ ವಹಿಸಿದ್ದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ತಮ್ಮ ಬೆಂಬಲಿಗರೊಂದಿಗೆ ದೇವಾಲಯಕ್ಕೆ ಆಗಮಿಸಿ 40 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಪ್ರಸಾದ್‍ಬಾಬು, ಕೆ.ಜಯದೇವ್ ಇದ್ದರು.
ನಗರದ ಬ್ರಾಹ್ಮಣರ ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ರಾಯರ ಬೃಂದಾನವಕ್ಕೆ ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಲಾಗಿತ್ತು. ನೂರಾರು ಮಂದಿ ಭಕ್ತರು ಆಗಮಿಸಿ ಗುರುಗಳ ದರ್ಶನ ಪಡೆದರು. ನಗರದ ಕೆಇಬಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.