ಕೋಲಾರ: ಅಫ್ಗಾನಿಸ್ತಾನ, ತಾಲಿಬಾನ್, ಪಾಕಿಸ್ತಾನ ಭಯೋತ್ಪಾದನೆ ನಿರ್ಮಾಣ ಮಾಡುವ ಹಾಗೂ ಇಡೀ ಜಗತ್ತನ್ನೇ ಹಾಳು ಮಾಡಲು ಇರುವ ದೇಶಗಳು. ಈ ರೀತಿ ಮನ್ನಣೆ, ಮಾನ್ಯತೆ ನೀಡುವುದು ಸರಿ ಅಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ವಿದೇಶಿ ನೀತಿ ಹಿನ್ನೆಲೆಯಲ್ಲಿ ಮಾತುಕತೆ ನಡೆದಿದೆಯೋ ಗೊತ್ತಿಲ್ಲ ಎಂದರು.
ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಜೊತೆ ಭಾರತ ಸರ್ಕಾರದ ಮಾತುಕತೆ ಕುರಿತ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಇಸ್ಲಾಮಿಕ್ ಹಲಾಲ್ ಉತ್ಪನ್ನಗಳನ್ನು ದೀಪಾವಳಿ ಪೂಜೆಗಾಗಲಿ, ಅಲಂಕಾರಕ್ಕಾಗಲಿ, ಬೇರೆ ಯಾವುದೇ ಉದ್ದೇಶಕ ತೆಗೆದುಕೊಳ್ಳಬಾರದು. ಅದು ಅಪವಿತ್ರ, ಅಶುದ್ಧ. ಉಗುಳುವುದು, ಮೂರ್ತಿ ವಿಸರ್ಜನೆ ಮಾಡುತ್ತಾರೆ, ಹೇಸಿಗೆ ಮಾಡುತ್ತಾರೆ. ಹಿಂದೂಗಳ ಕಡೆಯಿಂದಲೇ ವ್ಯಾಪಾರ ಮಾಡಬೇಕು, ಹಲಾಲ್ ಮುಕ್ತ ದೀಪಾವಳಿ ಆಚರಿಸಬೇಕು ಎಂದು ಆಗ್ರಹಿಸಿದರು.
ಪೆಹಲ್ಗಾಂನಲ್ಲಿ ಈಚೆಗೆ ನಡೆದ ಕೃತ್ಯವನ್ನು ಹಿಂದೂಗಳು ಯಾವತ್ತಿಗೂ ಮರೆಯಬಾರದು. ಪ್ರವಾಸಕ್ಕೆಂದು ಹೋಗಿದ್ದ 26 ಹಿಂದೂಗಳನ್ನು ಇಸ್ಲಾಮಿಕ್ ಹೆಸರಿನಲ್ಲಿ ಕೊಂದು ಹಾಕಿದರು. ಹಿಂದೂ ಧರ್ಮದವರೇ ಎಂದು ಹೇಳಿ ಹೊಡೆದು ಹಾಕಿದರು. ಹೀಗಾಗಿ, ಹಿಂದೂಗಳು ಕೂಡ ಧರ್ಮ ಕೇಳಿ ವ್ಯಾಪಾರ ಮಾಡಬೇಕು. ಆಗ ಮಾತ್ರ ಹಿಂದೂ ಸಮಾಜ ಉಳಿಯುತ್ತದೆ, ಸುರಕ್ಷಿತವಾಗಿರುತ್ತದೆ ಎಂದರು.
ಇಸ್ಲಾಂ ಹುಟ್ಟಿ 500 ವರ್ಷಗಳಾಗಿದೆ. ಆದರೆ, ಈಗ ಐ ಲವ್ ಮಹಮ್ಮದ್ ಎಂಬ ವಿಕೃತಿ ಏಕೆ ಎಂಬುದು ಗೊತ್ತಾಗುತ್ತಿಲ್ಲ. ಇಡೀ ದೇಶದಲ್ಲಿ ಹಿಂದೂ ವಿರೋಧಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹಿಂದೂಗಳನ್ನು ಕೆಣಕಲು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಇರುವ ಕಡೆ ಇದು ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಜಾತಿ, ಹಣ, ಭ್ರಷ್ಟ ವ್ಯವಸ್ಥೆಯ ಮೇಲೆ ರಾಜಕೀಯ ನಡೆಯುತ್ತಿದೆ. ಸಿದ್ಧಾಂತ, ಕಾರ್ಯಕರ್ತರು, ದೇಶ, ಧರ್ಮ ಎಂಬುದು ಎಳ್ಳಷ್ಟೂ ಉಳಿದಿಲ್ಲ. ಹೋರಾಟಗಾರರಿಗೆ ಹಿಂದುತ್ವವಾದಿಗಳಿಗೆ, ಪ್ರಾಮಾಣಿಕರಿಗೆ ಇವತ್ತಿನ ರಾಜಕೀಯ ವ್ಯವಸ್ಥೆ ಒಳಗೆ ಹೋಗಲು ಬಹಳ ಕಷ್ಟ. ಹೀಗಾಗಿ, ನಾವು ಸಂಘಟನೆ ಮೂಲಕವೇ ದೇಶದ ಪರಿವರ್ತನೆ ಮಾಡಲು ಮುಂದಾಗಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.