ADVERTISEMENT

ಮುಳಬಾಗಿಲು: ಅಳಿವಿನ ಅಂಚಿನಲ್ಲಿ ಹಂಚುಕಲ್ಲು ಬೆಟ್ಟ

ಹಂಚುಕಲ್ಲು ಬೆಟ್ಟ ಅಭಿವೃದ್ಧಿಪಡಿಸಿದರೆ, ನಗರಸಭೆಗೆ ಆದಾಯ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 27 ಸೆಪ್ಟೆಂಬರ್ 2025, 1:49 IST
Last Updated 27 ಸೆಪ್ಟೆಂಬರ್ 2025, 1:49 IST
ಮುಳಬಾಗಿಲು ನಗರದ ಹೊರವಲಯದ ಬಳಿ ಇರುವ ರಮಣೀಯ ಹಂಚುಕಲ್ಲು ಬೆಟ್ಟ
ಮುಳಬಾಗಿಲು ನಗರದ ಹೊರವಲಯದ ಬಳಿ ಇರುವ ರಮಣೀಯ ಹಂಚುಕಲ್ಲು ಬೆಟ್ಟ   

ಮುಳಬಾಗಿಲು: ಕರ್ನಾಟಕ ರಾಜ್ಯಕ್ಕೆ ಮೊಟ್ಟಮೊದಲಿಗೆ ಸೂರ್ಯನ ಕಿರಣಗಳು ಬೀಳುವ ಮುಳಬಾಗಿಲು ತಾಲ್ಲೂಕು ರಾಜ್ಯದ ಮೂಡಣ ದಿಕ್ಕಿನಲ್ಲಿದೆ. ಮೂಡಲಬಾಗಿಲು ಅಥವಾ ಜನರ ಬಾಯಲ್ಲಿ ಮುಳಬಾಗಿಲು ಎಂದು ಕರೆಯಲ್ಪಡುವ ತಾಲ್ಲೂಕು ಐತಿಹಾಸಿಕ ಮತ್ತು ಪೌರಾಣಿಕವಾಗಿ ಅನೇಕ ಪ್ರತೀತಿಗಳನ್ನು ಒಳಗೊಂಡಿದೆ. ನಗರದ ಹೊರವಲಯದ ಹಂಚುಕಲ್ಲು ಬೆಟ್ಟ ಮತ್ತಷ್ಟು ಪುರಾಣಗಳನ್ನು ಹೊತ್ತು ನಿಂತಿದೆ.

ಮುಳಬಾಗಿಲು ನಗರದ ಹೊರವಲಯದ ನಂಗಲಿ ಹಾಗೂ ನರಸಿಂಹ ತೀರ್ಥದ ಮಾರ್ಗದಲ್ಲಿ ಇರುವ ಹಂಚುಕಲ್ಲು ಪ್ರದೇಶವನ್ನು ವೀರಭದ್ರ ನಗರ ಬೆಟ್ಟ ಎಂದೂ ಕರೆಯಲಾಗುತ್ತದೆ. ಈ ಬೆಟ್ಟವು ಐತಿಹಾಸಿಕ ಸ್ಮಾರಕವಾಗಿದ್ದರೂ, ಬಹುತೇಕ ಮಂದಿಗೆ ಈ ಬಗ್ಗೆ ತಿಳಿಯದೆ ಇರುವುದು ದುರಂತವೇ ಸರಿ.

ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಹಾಗೂ ರಾಜ್ಯದ ಕಟ್ಟಕಡೆಯ ಗಡಿ ತಾಲ್ಲೂಕು ಕೇಂದ್ರವಾದ ಮುಳಬಾಗಿಲು ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಹಲವು ಅಂಶಗಳನ್ನು ಒಳಗೊಂಡಿದೆ. ಆದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಮುಳಬಾಗಿಲಿನಲ್ಲಿರುವ ಐತಿಹಾಸಿಕ ಸ್ಥಳಗಳು ಮುನ್ನೆಲೆಗೆ ಬರುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. 

ADVERTISEMENT

ಪ್ರಾಕೃತಿಕ ಸಂಪತ್ತು ಹಾಗೂ ರಮಣೀಯ ನೋಟದ ಹಂಚುಕಲ್ಲು ಬೆಟ್ಟ ಪೌರಾಣಿಕ ಹಿನ್ನೆಲೆಯನ್ನು ಹೊಂದಿದ್ದರೂ ನೋಡುಗರಿಗೆ ಕೇವಲ ಒಂದು ಬೆಟ್ಟವಷ್ಟೇ ಎಂದು ಜನಸಾಮಾನ್ಯರು ಭಾವಿಸಿದ್ದಾರೆ. 

ತಾಲ್ಲೂಕು ಗಂಗರು, ನೊಳಂಬರು, ವಿಜಯ ನಗರದ ಅರಸರ ಆಳ್ವಿಕೆಗೆ ಒಳಪಟ್ಟಿದ್ದು, ವಿಜಯ ನಗರದ ಅರಸರ ಕಾಲದಲ್ಲಿ ಮುಳಬಾಗಿಲು ಶ್ರೀಮಂತಿಕೆಯಿಂದ ಹೆಚ್ಚು ಪ್ರಾಧಾನ್ಯತೆ ಪಡೆದಿತ್ತು. ಪಾಲಾರ್, ಕೌಂಡಿನ್ಯ ಎಂಬ ನದಿಗಳೂ ಸಹ ಇಲ್ಲಿ ಹರಿಯುತ್ತಿದ್ದವು ಎಂಬ ಮಾಹಿತಿಯನ್ನು ತಾಲ್ಲೂಕಿನಲ್ಲಿ ಕ್ರಿ.ಶ. 400 ರಿಂದ 750 ರವರೆಗೆ ಸಿಕ್ಕಿರುವ ಶಾಸನಗಳು ತಿಳಿಸುತ್ತವೆ ಎನ್ನುತ್ತಾರೆ ಇತಿಹಾಸ ತಜ್ಞರು. 

ಮುಳಬಾಗಿಲು ತಾಲ್ಲೂಕಿನಲ್ಲಿ ಈಗಾಗಲೇ ಆವಣಿ, ಕುರುಡುಮಲೆ, ಆಂಜನೇಯ ದೇವಾಲಯ, ನರಸಿಂಹ ತೀರ್ಥ, ವಿರೂಪಾಕ್ಷಿ ಸೇರಿದಂತೆ ಇನ್ನತಿರ ಪ್ರವಾಸಿ ತಾಣಗಳಿವೆ. ಹಂಚುಕಲ್ಲು ಬೆಟ್ಟವನ್ನು ಪ್ರಾಚ್ಯವಸ್ತು ಇಲಾಖೆ ಅಥವಾ ಪ್ರವಾಸಿ ಇಲಾಖೆ ಅಭಿವೃದ್ಧಿ ಪಡಿಸಬೇಕು ಎಂದು ಮಂಡಿಕಲ್ ಮಂಜುನಾಥ್ ಪ್ರತಿಪಾದಿಸಿದರು.

ತಿರುಪತಿ, ಕಾಳಹಸ್ತಿ ಸೇರಿದಂತೆ ಇನ್ನಿತರ ಕಡೆಗಳಿಗೆ ತೆರಳುವವರು ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 75ರ ಮೂಲಕವೇ ಹೋಗಬೇಕು. ಹೆದ್ದಾರಿಗೆ ಹೊಂದಿಕೊಂಡ ಹಂಚುಕಲ್ಲು ಬೆಟ್ಟವನ್ನು ಸ್ಮಾರಕವಾಗಿಸಬೇಕು. ಬೆಟ್ಟವನ್ನು ಅಭಿವೃದ್ಧಿಪಡಿಸಿದರೆ, ಮುಳಬಾಗಿಲು ನಗರದ ಸೌಂದರ್ಯದ ಹೆಚ್ಚಲಿದೆ. ಜೊತೆಗೆ ನಗರಸಭೆಗೆ ಆದಾಯದ ಮೂಲವೂ ಆಗಲಿದೆ ಎಂದು ಭಜರಂಗಿ ಚಲಪತಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಬೆಟ್ಟದಲ್ಲಿದೆ ವಿಜಯ ಸ್ತಂಭ

ಮುಳಬಾಗಿಲು ನಗರದ ಪೂರ್ವಕ್ಕಿರುವ ಹಂಚುಕಲ್ಲು ಬೆಟ್ಟದಲ್ಲಿ ಅಕ್ಷ್ಯೋಭ್ಯ ತೀರ್ಥರು ತಪಸ್ಸು ಮಾಡುತ್ತಿದ್ದರು. ಅಲ್ಲದೆ ವಿದ್ಯಾರಣ್ಯರು ಬೆಟ್ಟದ ಮೇಲೆ ನಿಂತು ಅಕ್ಷ್ಯೋಭ್ಯ ತೀರ್ಥರ ಜೊತೆ ಧರ್ಮ–ಅಧರ್ಮದ ಬಗ್ಗೆ ವಾದ ಮಾಡಿದ್ದರು. ಈ ವಾದದಲ್ಲಿ ವಿದ್ಯಾರಣ್ಯರನ್ನು ಅಕ್ಷ್ಯೋಭ್ಯ ಸೋಲಿಸಿದ್ದ. ಇದರ ಸ್ಮರಣಾರ್ಥವಾಗಿ ವಿಜಯ ಸ್ತಂಭ ಸ್ಥಾಪಿಸಲಾಗಿದೆ ಎಂಬ ಪ್ರತೀತಿ ಇದೆ.  ಡಾ.ಜಿ.ಶಿವಪ್ಪ ಇತಿಹಾಸ ತಜ್ಞರು

ವಿದ್ಯಾರಣ್ಯರು ಹಾಗೂ ಅಕ್ಷೋಭ್ಯ ತೀರ್ಥರು ಸಮಾಗಮ ಆಗಿದ್ದರೆಂಬ ಬೆಟ್ಟದ ಮೇಲಿನ ಸ್ಥಳ
ಐತಿಹಾಸಿಕ ಹಾಗೂ ಪೌರಾಣಿಕ ಗುರುತುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.