ADVERTISEMENT

ಬಿಜೆಪಿಯಿಂದ ದ್ವೇಷದ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 14:30 IST
Last Updated 17 ನವೆಂಬರ್ 2019, 14:30 IST

ಕೋಲಾರ: ‘ಜಿಲ್ಲೆಯ ಅಭಿವೃದ್ದಿಗೆ ಹಿಂದಿನ ಸಮ್ಮಿಶ್ರ ಸರ್ಕಾರ ನೀಡಿದ್ದ ಅನುದಾನ ವಾಪಸ್ಸು ಪಡೆಯುವ ಮೂಲಕ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಶಾಸಕ ಕೃಷ್ಣಬೈರೇಗೌಡ ಆರೋಪಿಸಿದರು.

ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉತ್ತರ ಕರ್ನಾಟದಲ್ಲಿ ಸಂಭವಿಸಿರುವ ಪ್ರವಾಹವನ್ನು ಮುಂದಿಟ್ಟುಕೊಂಡು ಅನುದಾನ ತಡೆಹಿಡಿಯಾಗಿದೆ ಎಂದು ಹೇಳಿದ ನೀಡಿರುವ ಬಿಜೆಪಿ ಮುಖಂಡರು ತಮಗೆ ಬೇಕಾಗಿರುವ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿದ್ದಾರೆ’ ಎಂದು ದೂರಿದರು.

‘ಕೋಲಾರ ನಗರದ ಅಭಿವೃದ್ದಿಗೆ ಅಮೃತ್, ಲೋಕಪಯೋಗಿ ಇಲಾಖೆಯಡಿ, ನಗರೋತ್ಥಾನ ಯೋಜನೆಗಳಡಿ ₨ ೧೧೦ ಕೋಟಿ ಅನುದಾನ ಮಂಜೂರು ಅಗಿತ್ತು. ಜತೆಗೆ ಗ್ರಾಮೀಣಾ ರಸ್ತೆಗಳಿಗೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ₨ ೧೨ ಕೋಟಿ ನೀಡಲಾಗಿತ್ತು, ಈಗ ಎಲ್ಲಾ ಕಾಮಗಾರಿಗಳಿಗೂ ತಡೆ ನೀಡಲಾಗಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು.

ADVERTISEMENT

‘ಇಂತಹ ಕೀಳುಮಟ್ಟದ ರಾಜಕಾರಣ ಹೆಚ್ಚು ದಿನ ನಡೆಯಲ್ಲ, ಇದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಕೇಂದ್ರ ಸರ್ಕಾರ ನೆರೆಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಬರಕ್ಕೆ ₨ ೪,೭೦೦ ಕೋಟಿ ನೀಡಿದೆ. ರಾಜ್ಯದಲ್ಲಿ ₨ ೫೦ ಸಾವಿರ ಕೋಟಿ ರೂ ನಷ್ಟವಾಗಿದ್ದರೂ, ಅನೇಕ ಒತ್ತಡಗಳ ನಂತರ ₨ ೧,೨೦೦ ಕೋಟಿ ನೀಡಿದ್ದಾರೆ, ಇದನ್ನು ಮೊದಲ ಕಂತು ಎನ್ನುತ್ತಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರದ ಧೋರಣೆಯಿಂದ ರಾಜ್ಯದಲ್ಲಿ ಅನೇಕ ಕೈಗಾರಿಕೆಗಳು ಮುಚ್ಚುವ ಭೀತಿಯಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುವ ಆತಂಕ ಕಾಡುತ್ತಿದೆ. ಉದ್ಯಮಗಳು ನಷ್ಟದಲ್ಲಿವೆ ಎಂದು ತಿಳಿಸಿ ಕೇಂದ್ರದ ಆರ್ಥಿಕ ನೀತಿಯಿಂದ ಸಂಕಷ್ಟ ಮತ್ತಷ್ಟು ಹೆಚ್ಚುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.