ADVERTISEMENT

ಕಾಂಗ್ರೆಸ್‌ನ ಭಗೀರಥ ಸ್ವಾರ್ಥ ರಾಜಕಾರಣಿ ರಮೇಶ್‌ಕುಮಾರ್‌: ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 6:28 IST
Last Updated 29 ನವೆಂಬರ್ 2021, 6:28 IST

ಕೋಲಾರ: ‘ಜಿಲ್ಲೆಯ ರಾಜಕಾರಣದಲ್ಲಿ ಪಕ್ಷಗಳ ತೀರ್ಮಾನಕ್ಕಿಂತ ವ್ಯಕ್ತಿಗಳ ತೀರ್ಮಾನವೇ ಕ್ರಿಯಾಶೀಲವಾಗಿದೆ. ಜಿಲ್ಲೆಯ ಕಾಂಗ್ರೆಸ್‍ನ ಮಹಾ ನಾಯಕರು, ಭಗೀರಥರು ಎನಿಸಿಕೊಂಡಿರುವ ಒಬ್ಬ ವ್ಯಕ್ತಿ ಚುನಾವಣೆ ಸಂದರ್ಭಕ್ಕೆ ತಕ್ಕಂತೆ ನಾಟಕವಾಡಿ ಅನೇಕರನ್ನು ಬೀದಿಗೆ ತಂದಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ನ ಆ ಮಹಾನುಭಾವ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪರ ಗೆಲುವಿಗೆ ಅಡ್ಡಗಾಲು ಹಾಕಿದರು. ವಿಧಾನಸಭಾ ಚುನಾವಣೆ ವೇಳೆ ನಮ್ಮ ಪಕ್ಷದ ಪ್ರಾಡಕ್ಟ್ ಬ್ಯಾಲಹಳ್ಳಿ ಗೋವಿಂದಗೌಡರನ್ನು ಹಾಗೂ ಅವರ ಬ್ಯಾಂಕನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಕೊನೆಗೆ ಟಿಕೆಟ್ ಕೊಡಿಸದೆ ಬೀದಿಗೆ ತಂದಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‍ನ ಪರಿಶುದ್ಧ ರಾಜಕಾರಣದ ವ್ಯಕ್ತಿಯಿಂದ ಬಿಜೆಪಿ ಅಭ್ಯರ್ಥಿಯ ಆಯ್ಕೆಯೂ ಆಗಿದೆ. ಅವರು ಮಹಾ ನಾಯಕರು, ಸಾಕಷ್ಟು ಮಾತು ಬಲ್ಲವರು. ಅವರಷ್ಟು ಮಾತನಾಡಲು ನನಗೆ ಬರಲ್ಲ. ಅವರ ದ್ರೋಹದಿಂದ ಮುನಿಯಪ್ಪ ಅವರು ಈ ವೇಳೆಗಾಗಲೇ ಕಾಂಗ್ರೆಸ್ ಬಿಡಬೇಕಿತ್ತು. ಆದರೆ, ಮುನಿಯಪ್ಪ ಪ್ರಾಮಾಣಿಕರು, ಪಕ್ಷ ನಿಷ್ಠೆಯ ವ್ಯಕ್ತಿ. ಹೀಗಾಗಿ ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದಾರೆ. ಅವರು ಜೆಡಿಎಸ್ ಸಂಪರ್ಕದಲ್ಲಿ ಇಲ್ಲ. ಆದರೂ ನಾವು ಅವರ ವಿರುದ್ಧ ಲಘುವಾಗಿ ಮಾತನಾಡಲ್ಲ’ ಎಂದರು.

ADVERTISEMENT

ಜಿಲ್ಲೆಯಲ್ಲಿ ಠಿಕಾಣಿ: ‘ನಮ್ಮ ಅಭ್ಯರ್ಥಿ ಈ ಚುನಾವಣೆಯಲ್ಲಿ ತಟಸ್ಥರಾಗುವುದಿಲ್ಲ. ಅಭ್ಯರ್ಥಿ ರಾಮು ಗೆಲುವಿಗೆ ಕೋಲಾರ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನ ಠಿಕಾಣಿ ಹೂಡುತ್ತೇವೆ. ಪಕ್ಷದಿಂದ ದೂರವಾಗಿರುವ ಶ್ರೀನಿವಾಸಗೌಡರಿಗೆ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಶ್ರೀನಿವಾಸಗೌಡರು ದೇವೇಗೌಡರ ಕುಟುಂಬದ ಬಗ್ಗೆ ಏನೇ ಮಾತನಾಡಿದರೂ ಪರವಾಗಿಲ್ಲ. ಶ್ರೀನಿವಾಸಗೌಡರ ಬಗ್ಗೆ ಮೃಧು ಧೋರಣೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜೆಡಿಎಸ್‌ನಲ್ಲಿ ಮೇವು ಕಡಿಮೆಯಾಗಿದ್ದರಿಂದ ನಮ್ಮ ಪಕ್ಷದ ನಾಯಕರು ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೆ. ಇದಕ್ಕೆ ಧೃತಿಗೆಡುವುದಿಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ಬರಲು ಶ್ರಮಿಸುತ್ತೇವೆ. ಇದಕ್ಕೆ ಯೋಜನೆ ರೂಪಿಸಿದ್ದೇವೆ. ಕಡಿಮೆ ಅಂತರದಲ್ಲಿ ಸೋತಿರುವ ಕಡೆ ಪಕ್ಷ ಸಂಘಟಿಸಿ 123 ಸ್ಥಾನ ಗೆಲ್ಲಲು ಯಾವ ತಂತ್ರ ರೂಪಿಸಬೇಕೆಂದು ನಿರ್ಧರಿಸುತ್ತೇವೆ. ಪಕ್ಷದ ಆಗಿರುವ ಹಿನ್ನಡೆ ಬಗ್ಗೆ ಚರ್ಚಿಸಲಾಗಿದೆ’ ಎಂದರು.

ಲೂಟಿ ಯೋಜನೆ: ‘ಕೆ.ಸಿ ವ್ಯಾಲಿ ಯೋಜನೆಯ ನೀರಿನ 3ನೇ ಹಂತದ ಸಂಸ್ಕರಣೆಗೆ ಒತ್ತಾಯಿಸಿದ್ದೆವು. ಕೋಲಾರದ ತರಕಾರಿಗೆ ಈ ಹಿಂದೆ ಒಳ್ಳೆಯ ಬೆಲೆ ಇತ್ತು. ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬಂದ ನಂತರ ಮಾರುಕಟ್ಟೆಯಲ್ಲಿ ಕೋಲಾರದ ತರಕಾರಿ ಕೇಳುವವರಿಲ್ಲ ಇಲ್ಲ. ಕೆ.ಸಿ ವ್ಯಾಲಿ ಯೋಜನೆಯಿಂದ ಬೆಳೆಗಳ ಮೇಲೆ ಆಗುವ ಪರಿಣಾಮಗಳ ಕುರಿತು ಅವಲೋಕಿಸಬೇಕು. ಜತೆಗೆ ಅಂತರ್ಜಲ ಹಾಗೂ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮ ಮುಂದೆ ಗೊತ್ತಾಗಲಿದೆ. ಎತ್ತಿನಹೊಳೆ ಯೋಜನೆಯು ಹಣ ಲೂಟಿ ಮಾಡುವ ಯೋಜನೆ’ ಎಂದು ಕಿಡಿಕಾರಿದರು.

‘ನೀರಾವರಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ನಮ್ಮ ಹೇಳಿಕೆಗೆ ಬಣ್ಣ ಕಟ್ಟಿ ಏನೇನೋ ಮಾತನಾಡುತ್ತಾರೆ. ಕೆ.ಸಿ ವ್ಯಾಲಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸಿ ಹರಿಸಬೇಕು ಎಂಬುದು ನಮ್ಮ ಆಗ್ರಹ, ಎತ್ತಿನಹೊಳೆ ಯೋಜನೆಗೆ ಸರಿಯಾಗಿ ಕ್ರಿಯಾಯೋಜನೆ ರೂಪಿಸದೆ ಮನಬಂದಂತೆ ಕಾಮಗಾರಿ ನಡೆಸಿ ಹಣ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಗುಡುಗಿದರು.

ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು, ಮುಖಂಡರಾದ ಸಮೃದ್ಧಿ ಮಂಜುನಾಥ್, ಜಿ.ಇ.ರಾಮೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.