ADVERTISEMENT

ಕುಮಾರಸ್ವಾಮಿಗೆ ಬೆಳ್ಳಿ ತಟ್ಟೆಯಲ್ಲಿ ಆತಿಥ್ಯ

ವಿಡಿಯೋ ವೈರಲ್‌: ಸಾರ್ವಜನಿಕವಾಗಿ ತೀವ್ರ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 10:22 IST
Last Updated 8 ಫೆಬ್ರುವರಿ 2020, 10:22 IST

ಕೋಲಾರ: ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ಶುಕ್ರವಾರ ನಡೆದ ಚಂದ್ರಮೌಳೇಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದ ಸ್ಥಳೀಯ ಮುಖಂಡರ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಉಪಾಹಾರ ಸೇವಿಸಿದ್ದು, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಳಿಗ್ಗೆ ಬೆಂಗಳೂರಿನಿಂದ ಕಲ್ಲಂಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಕುಮಾರಸ್ವಾಮಿ ಅವರು ವಕ್ಕಲೇರಿ ಗ್ರಾಮದಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಜೆಡಿಎಸ್‌ ಮುಖಂಡ ರಾಮು ಅವರ ಮನೆಗೆ ಭೇಟಿ ನೀಡಿದ್ದರು.

ಈ ವೇಳೆ ರಾಮು ಕುಟುಂಬ ಸದಸ್ಯರು ಕುಮಾರಸ್ವಾಮಿ, ಅವರ ಜತೆಗಿದ್ದ ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಮುಖಂಡ ಸಮೃದ್ಧಿ ಮಂಜುನಾಥ್‌ ಅವರಿಗೆ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ಚಮಚ, ಜಗ್‌ನಲ್ಲಿ ಭರ್ಜರಿ ಆತಿಥ್ಯ ನೀಡಿದರು.

ADVERTISEMENT

ಕುಮಾರಸ್ವಾಮಿ, ಶಾಸಕರು ಮತ್ತು ಮುಖಂಡರು ಬೆಳ್ಳಿ ತಟ್ಟೆಯಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್‌ ಸವಿದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್‌ ಆಗಿದ್ದು, ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.