ADVERTISEMENT

ದೇಶದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಮುಖ್ಯ: ಜಿಲ್ಲಾಧಿಕಾರಿ ಮಂಜುನಾಥ್‌

ವಿಶೇಷ ಲಸಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 14:30 IST
Last Updated 11 ಡಿಸೆಂಬರ್ 2019, 14:30 IST
ಕೋಲಾರದಲ್ಲಿ ಬುಧವಾರ ನಡೆದ ವಿಶೇಷ ಲಸಿಕೆ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ವಿಶೇಷ ಲಸಿಕೆ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿದರು.   

ಕೋಲಾರ: ‘ಭಾರತದ ಜನಸಂಖ್ಯೆಯಲ್ಲಿ ಶೇಕಡ 50ರಷ್ಟು ಯುವ ಮಾನವ ಸಂಪನ್ಮೂಲವಿದೆ. ಯುವಕ ಯುವತಿಯರು ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಕೌಶಲ ಪಡೆದರೆ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಲಸಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ದೇಶದ ಅಭಿವೃದ್ಧಿಗೆ ಆರೋಗ್ಯ ಮತ್ತು ಶಿಕ್ಷಣ ತುಂಬಾ ಮುಖ್ಯ’ ಎಂದು ಹೇಳಿದರು.

‘ಮಕ್ಕಳು ಯಾವುದೇ ಕಾರಣಕ್ಕೂ ಲಸಿಕೆ ಕಾರ್ಯಕ್ರಮದಿಂದ ಹೊರಗುಳಿಯಬಾರದು. ಪ್ರತಿ ಮಕ್ಕಳಿಗೂ ಲಸಿಕೆ ಹಾಕಬೇಕು. ಕಾಲ ಕಾಲಕ್ಕೆ ಸರಿಯಾಗಿ ಲಸಿಕೆ ಪಡೆಯುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು. ಲಸಿಕೆಯು ದೇಹಕ್ಕೆ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಕೆಲ ಪೋಷಕರು ಜಾಗೃತಿ ಕೊರತೆಯಿಂದ ಮಕ್ಕಳಿಗೆ ಲಸಿಕೆ ಹಾಕಿಸಲು ನಿರ್ಲಕ್ಷ್ಯ ತೋರುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಮಕ್ಕಳು ದೇಶದ ಆಧಾರ ಸ್ತಂಭ. ಅವರ ಉಜ್ವಲ ಭವಿಷ್ಯಕ್ಕೆ ಪೋಷಕರ ಸಹಕಾರ ಮುಖ್ಯ. ಲಸಿಕೆ ಹಾಕಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಆದ ಕಾರಣ ವದಂತಿಗೆ ಕಿವಿಗೊಡದೆ ಲಸಿಕೆ ಹಾಕಿಸಬೇಕು’ ಎಂದು ಸಲಹೆ ನೀಡಿದರು.

ಭಯ ಪಡಬೇಡಿ: ‘ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗಂಟಲು ಮಾರಿ ಪ್ರಕರಣ ತಡೆಗಟ್ಟುವುದು ಅಭಿಯಾನದ ಮೂಲ ಉದ್ದೇಶ. ಲಸಿಕೆ ಹಾಕಿದಾಗ ಮಕ್ಕಳಿಗೆ ಸ್ವಲ್ಪ ಜ್ವರ ಬರುವ ಸಾಧ್ಯತೆ ಇರುತ್ತದೆ. ಪೋಷಕರು ಇದಕ್ಕೆ ಭಯಪಡುವ ಅಗತ್ಯವಿಲ್ಲ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ವಿವರಿಸಿದರು.

‘ಜಿಲ್ಲೆಯ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಶಾಲೆಗಳು, ಮದರಸಾ ಮತ್ತು ಧಾರ್ಮಿಕ ಶಾಲೆಗಳು, ಇತರ ಇಲಾಖೆಗಳ ವಸತಿ ಶಾಲೆಗಳು, ನವೋದಯ ವಿದ್ಯಾಲಯ, ಅನಾಥಾಶ್ರಮಗಳು, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗದಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಹಾಕಬೇಕು. ಸಾಧಾರಣ ಜ್ವರ, ಗಂಟಲು ನೋವು ಮತ್ತು ನುಂಗಲು ತೊಂದರೆ ಆಗುವುದು, ಗಂಟಲಿನಲ್ಲಿ ಬೂದು ಬಣ್ಣದ ದಪ್ಪ ಪೊರೆ, ಕತ್ತಿನ ದುಗ್ದರಸ ಗ್ರಂಥಿಗಳ ಮತ್ತು ಸುತ್ತಮುತ್ತಲಿನ ಮೃದು ಅಂಗಾಂಶಗಳ ಉರಿತವು ಗಂಟಲು ಮಾರಿ ರೋಗದ ಲಕ್ಷಣಗಳಾಗಿವೆ’ ಎಂದು ತಿಳಿಸಿದರು.

ಲಸಿಕೆ ಗುರಿ: ‘ವಿಶೇಷ ಲಸಿಕೆ ಅಭಿಯಾನದಡಿ ಜಿಲ್ಲೆಯಲ್ಲಿ 36,468 ಮಕ್ಕಳಿಗೆ ಲಸಿಕೆ ಹಾಕುವ ಗುರಿಯಿದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಪೂರ್ಣ ಲಸಿಕೆ ಅಭಿಯಾನ ನಡೆಸುತ್ತಿದ್ದರೂ ಗಂಟಲು ಮಾರಿ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಡಿ.11ರಿಂದ 31ರವರೆಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಹೇಳಿದರು.

‘ಪ್ರಜೆಗಳು ಆರೋಗ್ಯವಾಗಿದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಕ್ಕಳು ಲಸಿಕೆ ಹಾಕಿಸಿಕೊಳ್ಳಲು ಹೆದರುವ ಅವಶ್ಯಕತೆಯಿಲ್ಲ’ ಎಂದು ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲ ಜಯರಾಜ್ ತಿಳಿಸಿದರು.

ಅಧಿಕಾರಿಗಳು ಲಸಿಕೆ ಅಭಿಯಾನದ ಕರಪತ್ರ ಮತ್ತು ಪೋಸ್ಟರ್‌ ಬಿಡುಗಡೆ ಮಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯಾ ದೀಪಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.