ADVERTISEMENT

ಹೆಲ್ಮೆಟ್‌: ಪೊಲೀಸರ ಭಯಕ್ಕಲ್ಲ, ಕುಟುಂಬದ ರಕ್ಷಣೆಗೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:31 IST
Last Updated 5 ಜನವರಿ 2026, 7:31 IST
ಕೆಜಿಎಫ್‌ ಪಂತನಹಳ್ಳಿಯಲ್ಲಿ ಭಾನುವಾರ ನಡೆದ ಉಚಿತ ಹೆಲ್ಮೆಟ್‌ ವಿತರಣೆ ಕಾರ್ಯಕ್ರಮದಲ್ಲಿ ಎಸ್.ಪಿ ಶಿವಾಂಶು ರಜಪೂತ್‌ ಅವರು ಅಂಗವಿಕಲ ಚಾಲಕನಿಗೆ ಹೆಲ್ಮೆಟ್‌ ನೀಡಿದರು. ದಾನಿ ಪ್ರಸಾದ್‌ ರೆಡ್ಡಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ ಇದ್ದರು 
ಕೆಜಿಎಫ್‌ ಪಂತನಹಳ್ಳಿಯಲ್ಲಿ ಭಾನುವಾರ ನಡೆದ ಉಚಿತ ಹೆಲ್ಮೆಟ್‌ ವಿತರಣೆ ಕಾರ್ಯಕ್ರಮದಲ್ಲಿ ಎಸ್.ಪಿ ಶಿವಾಂಶು ರಜಪೂತ್‌ ಅವರು ಅಂಗವಿಕಲ ಚಾಲಕನಿಗೆ ಹೆಲ್ಮೆಟ್‌ ನೀಡಿದರು. ದಾನಿ ಪ್ರಸಾದ್‌ ರೆಡ್ಡಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ ಇದ್ದರು    

ಕೆಜಿಎಫ್‌: ‘ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಭೀತಿಯಿಂದ ಹೆಲ್ಮೆಟ್‌ ಧರಿಸುವುದಲ್ಲ. ತಮ್ಮನ್ನು ನಂಬಿದ ಕುಟುಂಬದ ಪಾಲನೆ, ಪೋಷಣೆ ನನ್ನ ಜವಾಬ್ದಾರಿಯಾಗಿದೆ ಎಂಬುದನ್ನು ಅರಿತು ಹೆಲ್ಮೆಟ್‌ ಧರಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಕಿವಿಮಾತು ಹೇಳಿದರು.

ಆಂಧ್ರ ಗಡಿ ಅಂಚಿನಲ್ಲಿರುವ ಪಂತನಹಳ್ಳಿ ಬಳಿ ಭಾನುವಾರ ಉಚಿತ ಹೆಲ್ಮೆಟ್‌ ವಿತರಣೆ ಮಾಡಿ ಮಾತನಾಡಿ, ಹೆಲ್ಮೆಟ್‌ ಖರೀದಿ ಮಾಡುವಾಗ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಖರೀದಿ ಮಾಡಬೇಕು. ಅಪಘಾತವಾದರೆ ತಲೆ ರಕ್ಷಿಸುವ ಗುಣಮಟ್ಟ ಹೊಂದಿರಬೇಕು. ವಾಹನ ಸವಾರರಿಗೆ ಬಹಳಷ್ಟು ಕಾಲ ಅರಿವು ಮೂಡಿಸಿ ಈಗ ದಂಡ ವಿಧಿಸುವ ಪ್ರಕ್ರಿಯೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ಇದುವರೆಗೂ 2869 ಪ್ರಕರಣ ದಾಖಲು ಮಾಡಿಕೊಂಡು ₹14,34,500 ದಂಡ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕ ಪ್ರದೇಶದಲ್ಲಿ ದೊಂಬಿ ಮಾಡುವ ಅಥವಾ ಬೆದರಿಸುವ ಕೆಲಸವನ್ನು ಯಾರಾದರೂ ಕಿಡಿಗೇಡಿಗಳು ಮಾಡಿದರೆ ಸಾಧ್ಯವಾದರೆ ದೃಶ್ಯವನ್ನು ವಿಡಿಯೊ ಮಾಡಿಕೊಳ್ಳಿ. ಅದನ್ನು ಹಂಚಿಕೊಳ್ಳಿ. ಅಂತಹವರ ಮೇಲೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್‌ ಅಪರಾಧ ಬಗ್ಗೆ ಜನ ಎಚ್ಚರವಾಗಿರಬೇಕು. ಮೊಬೈಲ್‌ನಲ್ಲಿ ಬಂದ ಅಪರಿಚಿತ ಲಿಂಕ್‌ಗಳನ್ನು ಒತ್ತಬೇಡಿ. ಸೈಬರ್‌ ಮೋಸ ಹೋದಾಗ ಇಲಾಖೆ ಸೂಚಿಸಿರುವ 1039 ನಂಬರ್‌ಗೆ ತಕ್ಷಣ ಕರೆ ಮಾಡಿದರೆ ಹಣ ಉಳಿಸಬಹುದು ಎಂದರು.

ADVERTISEMENT

ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ವೆಂಕಟಕೃಷ್ಣಾರೆಡ್ಡಿ ಮಾತನಾಡಿ, ಹೆಲ್ಮೆಟ್‌ ಧರಿಸುವುದರ ಮಹತ್ವವನ್ನು ಮಹಿಳೆಯರಿಗೆ ತಿಳಿಸಬೇಕು. ಮನೆಯಿಂದ ಹೊರಗೆ ಹೋಗುವ ಕುಟುಂಬದ ಸದಸ್ಯರಿಗೆ ಅವರೇ ತಿಳಿವಳಿಕೆ ನೀಡುತ್ತಾರೆ ಎಂದು ಹೇಳಿದರು.

ಬೇತಮಂಗಲ ಸರ್ಕಲ್‌ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ ಮಾತನಾಡಿ, ಕುಪ್ಪಂ-ರಾಜಪೇಟೆ-ವಿ.ಕೋಟೆ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತದಲ್ಲಿ ಮೃತಪಟ್ಟ ಶೇ90ರಷ್ಟು ಮಂದಿ ಹೆಲ್ಮೆಟ್‌ ಧರಿಸದೆ ಇರುವುದರಿಂದ ಸಾವನ್ನಪ್ಪಿದ್ದಾರೆ. ಹೆಲ್ಮೆಟ್‌ ಕಡ್ಡಾಯ ಮಾಡಿದ ನಂತರ ಅಪಘಾತ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು. ದಾನಿ ಪ್ರಸಾದ್‌ ರೆಡ್ಡಿ, ಸಬ್‌ ಇನ್‌ಸ್ಪೆಕ್ಟರ್‌ ಗುರುರಾಜ್‌ ಚಿಂತಕಲ್‌ ಹಾಜರಿದ್ದರು.

ಲಾಂಗ್‌ ಹಿಡಿದರೆ ಜೋಕೆ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಬೇಕು. ವಿನಾಕಾರಣ ಗಲಭೆ ಸೃಷ್ಟಿಸಬಾರದು. ಕೆಲ ರೌಡಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಇನ್ನು ಉಳಿದವರು ಕೂಡ ಇದೇ ರೀತಿ ಸುಧಾರಣೆಯಾದರೆ ಅವರ ಹೆಸರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗುವುದು. ರೌಡಿಗಳು ಕೂಡ ಸಮಸ್ಯೆ ಎದುರಿಸಿದರೆ ನನ್ನ ಬಳಿ ಬನ್ನಿ. ನಿಮಗೆ ಸಹಾಯ ಮಾಡುತ್ತೇನೆ. ಅದರ ಬದಲು ಮಚ್ಚು ಲಾಂಗ್‌ ಹಿಡಿದರೆ ಪರಿಣಾಮ ನೆಟ್ಟಿಗಿರುವುದಿಲ್ಲ. ಗೂಂಡಾ ಕಾಯ್ದೆಯಡಿ ಜಿಲ್ಲೆಯಿಂದ ಹೊರಗೆ ಹಾಕಲಾಗುವುದು. ಈಗಾಗಲೇ ನಾಲ್ಕು ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.