ADVERTISEMENT

ಕೋಲಾರ | ಹೆಲ್ಮೆಟ್‌ ಧರಿಸದವರಿಗೆ ಪೊಲೀಸರ ಪಾಠ!

ಹೆಲ್ಮೆಟ್‌ ಹಾಕಿಕೊಂಡ ಬಂದ ಸವಾರರಿಗೆ ಗುಲಾಬಿ ನೀಡಿ ಸ್ವಾಗತಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:13 IST
Last Updated 2 ಡಿಸೆಂಬರ್ 2025, 7:13 IST
ಕೋಲಾರದಲ್ಲಿ ಸೋಮವಾರ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಮಹಿಳೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಗುಲಾಬಿ ಹೂವು ನೀಡಿದರು. ಡಿವೈಎಸ್ಪಿ ಎಂ.ಎಚ್‌.ನಾಗ್ತೆ, ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌, ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಜೊತೆಗಿದ್ದರು
ಕೋಲಾರದಲ್ಲಿ ಸೋಮವಾರ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಮಹಿಳೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಗುಲಾಬಿ ಹೂವು ನೀಡಿದರು. ಡಿವೈಎಸ್ಪಿ ಎಂ.ಎಚ್‌.ನಾಗ್ತೆ, ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌, ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಜೊತೆಗಿದ್ದರು   

ಕೋಲಾರ: ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಸೋಮವಾರದಿಂದಲೇ (ಡಿ.1) ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಮೊದಲ ದಿನ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಇಡೀ ಜಿಲ್ಲೆಯ ಬಹುತೇಕ ಪೊಲೀಸರು ಬೀದಿಗಿಳಿದು ಹೆಲ್ಮೆಟ್‌ ತಪಾಸಣೆ ಕಾರ್ಯಾಚರಣೆಯಲ್ಲಿ ತೊಡಗಿದ್ದು ವಿಶೇಷ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಇಡೀ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದರು. ನಗರದ ವಿವಿಧೆಡೆ ಸಂಚರಿಸಿ ಪರಿಶೀಲಿಸಿದರು.

ಬೆಳ್ಳಂಬೆಳಿಗ್ಗೆಯೇ ಎಲ್ಲಾ ವೃತ್ತಗಳಲ್ಲಿ ಅಡ್ಡನಿಂತ ಪೊಲೀಸರು, ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರನ್ನು ನಿಲ್ಲಿಸಿ ಪಾಠ ಮಾಡುತ್ತಿದ್ದ ದೃಶ್ಯ ಕಂಡುಬಂತು. ವಾಹನದ ಕೀ ಕಿತ್ತುಕೊಂಡು ಹೆಲ್ಮೆಟ್‌ ಖರೀದಿಸಿ ತರುವವರೆಗೆ ಬಿಡಲಿಲ್ಲ. ಕೆಲವರು ತಪ್ಪಿಸಿಕೊಂಡು ಹೋಗಲು ಹರಸಾಹಸಪಡುತ್ತಿದ್ದರು.

ADVERTISEMENT

ಮೊದಲ ದಿನವಾದ ಕಾರಣ ಯಾವುದೇ ಸವಾರರಿಗೆ ದಂಡ ವಿಧಿಸಲಿಲ್ಲ. ಬದಲಾಗಿ ದಂಡ ಪಾವತಿ ಮಾಡಬೇಕಿದ್ದ ಹಣದಲ್ಲೇ ಹೆಲ್ಮೆಟ್‌ ಖರೀದಿಸಿ ತರಬೇಕೆಂಬುದು ಕಡ್ಡಾಯವಾಗಿತ್ತು. ಆಮೇಲೆಷ್ಟೇ ವಾಹನ ಬಿಟ್ಟು ಕಳಿಸುತ್ತಿದ್ದರು.

ಹೆಲ್ಮೆಟ್‌ ಧರಿಸಿ ಬರುವ ಸವಾರರಿಗೆ ಎಸ್‌ಪಿ ನಿಖಿಲ್‌ ಗುಲಾಬಿ ಹೂವು ನೀಡಿ ಸ್ವಾಗತ ಕೋರಿದರು. ಅಂಥವರಿಗೆ ಶಹಬ್ಬಾಸ್‌ಗಿರಿ ನೀಡಿ ಸದಾ ಇದೇ ರೀತಿ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸುವಂತೆ ಕಿವಿಮಾತು ಹೇಳುತ್ತಿದ್ದರು. ಹೆಲ್ಮೆಟ್‌ ಧರಿಸದ ಸವಾರರಿಗೆ ಜೀವದ ಮಹತ್ವ ಹೇಳಿ ಎಚ್ಚರಿಕೆ ನೀಡಿ ಕಳಿಸುತ್ತಿದ್ದರು. ಇದೇ ವೇಳೆ ಹಲವು ಸಂಘ ಸಂಸ್ಥೆಗಳು ಉಚಿತವಾಗಿ ನೀಡಿದ ಹೆಲ್ಮೆಟ್‌ ಅನ್ನು ಅವರು ವಿತರಿಸಿದರು.

ನಗರದಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಭಾರತಿ ಹಾಗೂ ಸಿಬ್ಬಂದಿ ಇಡೀ ದಿನ ಕಾರ್ಯಾಚರಣೆಯಲ್ಲಿ ತೊಡಗಿದ್ದು ಕಂಡುಬಂತು.

ಡಿವೈಎಸ್ಪಿ ಎಂ.ಎಚ್‌.ನಾಗ್ತೆ, ಗಲ್‌ಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್ ಕೂಡ ನಗರದ ವಿವಿಧೆಡೆ ಸಂಚರಿಸಿ ನಿಗಾ ಇಟ್ಟಿದ್ದರು.

ಹೆಲ್ಮೆಟ್ ಕಡ್ಡಾಯ ವಿಚಾರ ಗೊತ್ತಿಲ್ಲದೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ನವ ವಧುವರರಿಗೆ ಸಂಚಾರ ಪೊಲೀಸ್ ಠಾಣೆಯ ಮುಂದೆ ಸಿಬ್ಬಂದಿ ಹೆಲ್ಮೆಟ್‌ ನೀಡಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಕೂಡ ಹೆಲ್ಮೆಟ್‌ ಧರಿಸುವಂತೆ ಜಾಗೃತಿಯಲ್ಲಿ ತೊಡಗಿದ್ದು ಕಂಡುಬಂತು. ಅವರು ನಗರದ ಕ್ಲಾಕ್ ಟವರ್‌ನಲ್ಲಿ ಜಿಲ್ಲಾ ಪೊಲೀಸರೊಂದಿಗೆ ಕೈಜೋಡಿಸಿ ಹೆಲ್ಮೆಟ್ ಇಲ್ಲದೆ ರಸ್ತೆಗೆ ಇಳಿಯದಂತೆ ಕಿವಿಮಾತು ಹೇಳುತ್ತಿದ್ದರು.

ಜಿಲ್ಲೆಯಲ್ಲಿ ದಿನೇದಿನೇ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಾಗಿ ಸಾವು ನೋವುಗಳು ಸಂಭವಿಸುತ್ತಿರುವ ಕಾರಣ ಜಿಲ್ಲಾ ಪೊಲೀಸರು ಡಿ.1ರಿಂದ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆ. 

ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದವರನ್ನು ಅಡ್ಡಗಟ್ಟಿದ ಪೊಲೀಸರು
ಕೋಲಾರದಲ್ಲಿ ಸೋಮವಾರ ಸಂಘ ಸಂಸ್ಥೆಗಳಿಂದ ಉಚಿತವಾಗಿ ಹೆಲ್ಮೆಟ್‌ ವಿತರಿಸಲಾಯಿತು
ಹೆಲ್ಮೆಟ್‌ ಧರಿಸಿ ಬಂದ ಮಹಿಳೆಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌ ಹಾಗೂ ಸಂಚಾರ ಪೊಲೀಸ್‌ ಠಾಣೆ ಪಿಎಸ್‌ಐ ಭಾರತಿ ಗುಲಾಬಿ ಹೂವು ನೀಡಿದರು
ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಸವಾರನನ್ನು ಅಡ್ಡಗಟ್ಟಿ ಬುದ್ಧಿವಾದ ಹೇಳಿದ ಪೊಲೀಸರು

ಮೊದಲ ಮೂರು ದಿನ ಪ್ರಯೋಗ; ನಂತರ ದಂಡ ಹೆಲ್ಮೆಟ್‌ ಖರೀದಿಸಿ ತರುವವರೆಗೆ ವಾಹನ ಬಿಡದ ಪೊಲೀಸರು ಪೊಲೀಸರಿಂದ ಸರ್ಕಲ್‌, ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ

ಮೊದಲ ದಿನ ಉತ್ತಮ ಸ್ಪಂದನೆ ಡಿ.1ರಿಂದ ಹೆಲ್ಮೆಟ್‌ ಕಡ್ಡಾಯ ಮಾಡಿದ್ದು ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರಕಿದೆ. ಜಿಲ್ಲೆಯ ಎಲ್ಲೆಡೆ ನಮ್ಮ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಶೇ 75ರಷ್ಟು ಮಂದಿ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಮೊದಲ ಮೂರು ದಿನ ದಂಡ ವಿಧಿಸುತ್ತಿಲ್ಲ. ಬದಲಾಗಿ ವಾಹನ ವಶಕ್ಕೆ ಪಡೆದು ಹೆಲ್ಮೆಟ್‌ ಖರೀದಿ ಮಾಡಿಕೊಂಡು ಬಂದ ಮೇಲೆ ಬಿಟ್ಟು ಕಳಿಸುತ್ತಿದ್ದೇವೆ. ಕೆಲವರಿಗೆ ಸಂಘ ಸಂಸ್ಥೆಗಳ ದಾನಿಗಳ ಮೂಲಕ ಹೆಲ್ಮೆಟ್‌ ಉಚಿತವಾಗಿ ಕೊಡಲಾಗಿದೆ. ಹೆಲ್ಮೆಟ್‌ ಹಾಕಿಕೊಂಡು ಬಂದವರಿಗೆ ಗುಲಾಬಿ ನೀಡಿ ಸ್ವಾಗತಿಸುತ್ತಿದ್ದೇವೆ. ಮೂರು ದಿನಗಳ ಬಳಿಕ ಹೆಲ್ಮೆಟ್‌ ಧರಿಸದಿದ್ದರೆ ವಾಹನ ವಶಕ್ಕೆ ಪಡೆದು ದಂಡ ವಿಧಿಸುತ್ತೇವೆ. ಹೆಲ್ಮೆಟ್‌ನೊಂದಿಗೆ ಬಂದು ದಂಡ ಪಾವತಿಸಿದ ಮೇಲೆ ವಾಹನ ಬಿಟ್ಟು ಕಳಿಸುತ್ತೇವೆ. ₹ 500 ರಿಂದ 1000 ವರೆಗೆ ದಂಡ ಬೀಳಲಿದೆ. ಮಾಲೂರು ಶ್ರೀನಿವಾಸಪುರ ಮುಳಬಾಗಿಲಿನಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯ ಎಲ್ಲಾ ಠಾಣೆಗಳ ಪೊಲೀಸರನ್ನು ನಿಯೋಜಿಸಿದ್ದೇವೆ. ಜೊತೆಗೆ ಜಾಗೃತಿ ಕೂಡ ಮೂಡಿಸುತ್ತಿದ್ದೇವೆ ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ

ಸಂಘ ಸಂಸ್ಥೆಗಳಿಂದ ಉಚಿತ ಹೆಲ್ಮೆಟ್‌ ಜಿಲ್ಲಾ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗ ಕನಿಷ್ಠ ವೇತನ ರಾಜ್ಯ ಅಧ್ಯಕ್ಷ ಟಿ.ಎಂ.ಶಾಹೀದ್ ಮೊಯಿದ್ದೀನ್ ನೇತೃತ್ವದಲ್ಲಿ ನಗರದ ಹಲವು ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆಗಳಲ್ಲಿ ಉಚಿತವಾಗಿ ನೂರಾರು ಹೆಲ್ಮೆಟ್‌ ವಿತರಣೆ ಮಾಡಲಾಯಿತು. ಜನರಲ್ಲಿ ಜಾಗೃತಿ ಮೂಡಿಸಿ ಅಮೂಲ್ಯವಾದ ಪ್ರಾಣ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆ ಮಾಡುತ್ತಿರುವ ಉತ್ತಮ ಕೆಲಸಕ್ಕೆ ಸಹಕಾರ ನೀಡುತ್ತಿದ್ದೇವೆ ಎಂದರು. ಜಿಲ್ಲಾ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷ ಸಮೀರ್ ಪಾಷ ಬ್ಲಾಕ್ ಅಧ್ಯಕ್ಷ ಆರೋಗ್ಯನಾಥನ್ ಜಿಲ್ಲಾ ಅಧ್ಯಕ್ಷ ಶ್ರೀನಾಥ್ ಹಾಗೂ ಉಪಾಧ್ಯಕ್ಷ ಆನಂದ ಕುಮಾರ್ ಇದ್ದರು. ಸರ್ವಜ್ಞ ಉದ್ಯಾನ ಬಳಿ ಯುವಶಕ್ತಿ ಸುಬ್ಬು ನೇತೃತ್ವದಲ್ಲಿ ಉಚಿತವಾಗಿ ಹೆಲ್ಮೆಟ್‌ ವಿತರಿಸಲಾಯಿತು.

ಹೆಲ್ಮೆಟ್‌ ಮಾರಾಟ ಬಿರುಸು ಜಿಲ್ಲಾ ಪೊಲೀಸರು ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದರಿಂದ ಹೆಲ್ಮೆಟ್‌ ಮಾರಾಟಗಾರರಿಗೆ ಸುಗ್ಗಿಕಾಲ ಬಂದೊದಗಿದೆ. ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ಹಿಡಿಯುತ್ತಿದ್ದ ಸ್ಥಳದಲ್ಲೇ ಹೆಲ್ಮೆಟ್‌ ಮಾರಾಟ ಮಾಡುತ್ತಿದ್ದದ್ದು ಕಂಡುಬಂತು. ಹಲವೆಡೆ ಅಂಗಡಿಗಳಲ್ಲೂ ಹೆಲ್ಮೆಟ್‌ಗೆ ಸವಾರರು ಮುಗಿಬಿದ್ದಿದ್ದರು. ಹೆಲ್ಮೆಟ್‌ ಖರೀದಿಸಿ ತಂದ ಮೇಲಷ್ಟೇ ದ್ವಿಚಕ್ರ ವಾಹನಗಳನ್ನು ಪೊಲೀಸರು ಬಿಟ್ಟು ಕಳಿಸುತ್ತಿದ್ದದ್ದು ಇದಕ್ಕೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.